ನವದೆಹಲಿ:ರಾಜ್ಯದಲ್ಲಿ ತಲೆದೋರಿರುವ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಂಗಳೂರು : ಏರ್ ಗನ್ ನಿಂದ ಶೂಟ್ ಮಾಡಿ ನಾಯಿಯ ಹತ್ಯೆ
ಉತ್ತರಾಖಂಡ್ ರಾಜ್ಯದಲ್ಲಿ ತಿರಥ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ ನಾಯಕತ್ವವನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಚುನಾವಣಾ ಆಯೋಗ ರಾಜ್ಯದಲ್ಲಿ ಉಪಚುನಾವಣೆ ನಡೆಸದಿರುವ ಸಾಧ್ಯತೆಯನ್ನು ಗಮನಿಸಿದರೆ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ರಾವತ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಮುಂದಿನ ಎರಡು ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗದ ಅಗತ್ಯವಿದೆ. ಆ ನಿಟ್ಟಿನಲ್ಲಿ ಉಪಚುನಾವಣೆ ನಡೆಯಬೇಕಾಗಿದೆ. ಆದರೆ ಸದ್ಯ ಚುನಾವಣೆ ನಡೆಯುವ ಲಕ್ಷಣ ಇಲ್ಲದ ಹಿನ್ನೆಲೆಯಲ್ಲಿ ರಾವತ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಅನುಮಾನ ಎಂಬ ಊಹಾಪೋಹ ಹಬ್ಬಿದ ಹಿನ್ನೆಲೆಯಲ್ಲಿ ರಾಜೀನಾಮೆ ವಿಚಾರ ಮುಂದಿಟ್ಟಿರುವುದಾಗಿ ಮೂಲಗಳು ಹೇಳಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಊಹಾಪೋಹದ ನಡುವೆಯೇ ತಿರಥ್ ಸಿಂಗ್ ಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಯಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.