Advertisement
ಸೋಮವಾರ ಫಲಿತಾಂಶ ಬಂದ ಕೂಡಲೇ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂ ರಾವ್ ರಾಜೀನಾಮೆ ನೀಡಿಯಾಗಿದೆ. ಇದರ ಜತೆಯಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೂಡ, “ರಾಜ್ಯದ ಹೊಣೆ’ ಬಿಡುವ ಬಗ್ಗೆ ಮಾತುಗಳನ್ನಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಇದರ ಜತೆಗೆ ಪಕ್ಷದ ಜವಾಬ್ದಾರಿ ಹೊತ್ತುಕೊಂಡಿರುವ ಮೂರೂ ಪ್ರಮುಖ ನಾಯಕರು ಏಕಕಾಲಕ್ಕೆ ಜವಾಬ್ದಾರಿಯಿಂದ ದೂರ ಸರಿಯಲು ಮುಂದಾಗಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರುವಾಗಲು ಕಾರಣವಾಗಿದೆ.
ಸಿದ್ದು ಮತ್ತು ದಿನೇಶ್ ಗುಂಡೂ ರಾವ್ ಅವರು ರಾಜೀನಾಮೆಗೂ ಮುನ್ನ ಪರಸ್ಪರ ಚರ್ಚಿಸಿದ್ದು, ಈ ಬಗ್ಗೆ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಖಂಡ್ರೆ ಅವರು ದಿನೇಶ್ ಗುಂಡೂ ರಾವ್ ವಿರುದ್ಧ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಆದರೂ ಫಲಿತಾಂಶದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಲು ಮುಂದಾಗಿದ್ದರು. ಆದರೆ ಏಕಕಾಲದಲ್ಲಿ ಎಲ್ಲರೂ ರಾಜೀನಾಮೆ ನೀಡಿದರೆ, ಪಕ್ಷದ ಜವಾಬ್ದಾರಿ ನೋಡಿ ಕೊಳ್ಳಲು ಯಾರೂ ಇಲ್ಲದಂತಾಗುತ್ತದೆ ಎಂಬ ಕಾರಣದಿಂದಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂಬ ಮಾತು ಕೇಳಿಬರುತ್ತಿವೆ.
Related Articles
ರಾಜೀನಾಮೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಅವರ ಮನವೊಲಿಕೆಗೆ ಆಪ್ತ ಶಾಸಕರು ಮತ್ತು ಮಾಜಿ ಶಾಸಕರು ಪ್ರಯತ್ನ ನಡೆಸಿದರು. ಆದರೆ ಸಿದ್ದರಾಮಯ್ಯ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪಲಿಲ್ಲ ಎನ್ನಲಾಗಿದೆ. ಪರಿಷತ್ ವಿಪಕ್ಷ ನಾಯಕ ಎಸ್. ಆರ್. ಪಾಟೀಲ್, ಸದಸ್ಯರಾದ ಜಯಮಾಲಾ, ಐವನ್ ಡಿ’ಸೋಜಾ, ಶಾಸಕರಾದ ಮಾಗಡಿ ಬಾಲಕೃಷ್ಣ, ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಕೆ.ಎನ್. ರಾಜಣ್ಣ ಸಹಿತ ಹಲವರು ಭೇಟಿ ಮಾಡಿ, ನಾಯಕತ್ವದ ಹೊಣೆಯಿಂದ ಹಿಂದೆ ಸರಿಯದೆ ತಾವೇ ಮುಂದುವರಿಯಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
Advertisement