ಉಳ್ಳಾಲ: ಕ್ರೀಡೆಯಿಂದ ಮಾತ್ರ ನಾಯಕತ್ವ ಗುಣ ಬೆಳೆದು ಸಾಧನೆ ಮಾಡಲು ಸಾಧ್ಯವಿರುವುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಮೈದಾನದಲ್ಲಿ ಆಡಲು ಅವಕಾಶ ಕಲ್ಪಿಸಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಯನ್ ಸಹನಾ ಕುಮಾರಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಒಳಾಂಗಣ ಸಭಾಂಗಣದಲ್ಲಿ ಯುಜಿಸಿ ಪ್ರಾಯೋಜಿತ ಫಿಟ್ನೇಸ್ ಘಟಕ, ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಸೆಮಿನಾರ್ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ರಾಜ್ಯಮಟ್ಟದಲ್ಲಿ ಕೇರಳ ಹಾಗೂ ಜಿಲ್ಲೆಯ ವಿಚಾರಕ್ಕೆ ಬಂದಾಗ ಮಂಗಳೂರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದು ಸಾಕಷ್ಟು ವ್ಯವಸ್ಥೆ, ಅವಕಾಶಗಳು ಕ್ರೀಡೆಯಲ್ಲಿದ್ದು, ಮಕ್ಕಳಿಗೆ ಪೋಷಕರ ಪ್ರೋತ್ಸಾಹ ಅಗತ್ಯವಿದೆ. ಮಂಗಳೂರು ವಿವಿಯಲ್ಲಿ
ನಿರ್ಮಾಣಗೊಂಡಿರುವ ಫಿಟ್ನೇಸ್ ಘಟಕ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ ಎಂದು ಹೇಳಿದರು.
ಸಾಧನೆಗೈಯಿರಿ
ಮುಖ್ಯ ಅತಿಥಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ದೇಹದಾರ್ಡ್ಯಪಟು ರೇಮಂಡ್ ಡಿ’ಸೋಜಾ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಹೊಸತನಕ್ಕೆ ಹೆಸರಾಗಿದೆ. ಹಿಂದೆ ಯಾವುದೇ ವ್ಯವಸ್ಥೆಗಳೂ ಇಲ್ಲದ ಸಂದರ್ಭದಲ್ಲಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದಾದರೆ, ಇಂದು ಸಾಕಷ್ಟು ವ್ಯವಸ್ಥೆಗಳಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಕೆ. ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ|ಎ.ಎಂ. ಖಾನ್, ವಿತ್ತಾಧಿಕಾರಿ ದಯಾನಂದ ನಾಯಕ್ ಉಪಸ್ಥಿತರಿದ್ದರು. ಕುಲಸಚಿವ ಪ್ರೊ| ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಕಿಶೋರ್ ಸಿ.ಕೆ. ವಂದಿಸಿದರು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.