ಮಂಡ್ಯ: ಜೆಡಿಎಸ್‌ನಲ್ಲಿ ನಿಖಿಲ್ ಉಮೇದುವಾರಿಕೆ ಬಗ್ಗೆ ಯಾರಲ್ಲೂ ಅಪಸ್ವರವಿಲ್ಲ ಎಂದು ಶಾಸಕ ಕೆ.ಸುರೇಶ್‌ಗೌಡ ತಿಳಿಸಿದರು. ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ನಂಬಿನಾಯಕನಹಳ್ಳಿ, ತರೀಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ,
ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡರು ಸ್ಪರ್ಧಾಕಾಂಕ್ಷಿಯಾಗಿದ್ದರು. ಆನಂತರದಲ್ಲಿ ನಿಖಿಲ್ ಅಭ್ಯರ್ಥಿಯಾಗಬೇಕು ಎಂದು ಅವರೇ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಸಿಎಂ ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲೂ ಕೂಡ ಅಭ್ಯರ್ಥಿ ಯಾರಾಗಬೇಕೆಂಬ ವಿಷಯ ಪ್ರಸ್ತಾಪಕ್ಕೆ ಬಂದಾಗ ಎಲ್ಲರೂ ಒಕ್ಕೊರಲಿನಿಂದ ನಿಖಿಲ್ ಹೆಸರನ್ನು ಸೂಚಿಸಿದ್ದೇವೆ. ಹಾಗಾಗಿ ವಿರೋಧ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಬೆಂಬಲ ಅನಿವಾರ್ಯ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಎರಡೂ ಪಕ್ಷದ ವರಿಷ್ಠರು ಯಾವ ಯಾವ ಕ್ಷೇತ್ರದಲ್ಲಿ ಪಕ್ಷಗಳು ಗೆಲ್ಲಲಿವೆ ಎನ್ನುವುದರ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಿದ್ದಾರೆ. ಅದರಂತೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ತೀರ್ಮಾನವಾಗಿದೆ. ಹಾಗಾಗಿ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸುವುದು ಅನಿವಾರ್ಯ. ಅದರಂತೆ ಡಿ.ಕೆ.ಶಿವಕುಮಾರ್ ಪಕ್ಷದ ಮುಖಂಡರು-ಕಾರ್ಯಕರ್ತರ ಸಭೆ ಕರೆದು ಭಿನ್ನಮತ ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ತಿಂಡಿ ತಿಂದಿದ್ದೇನೆ: ಅಂಬರೀಶ್ ಮನೆಗೆ ನಾನು ಹೋದ ಸಂದರ್ಭದಲ್ಲೆಲ್ಲಾ ತಿಂಡಿ ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆ ಬಗ್ಗೆ ಶಾಸಕ ಸುರೇಶ್‌ಗೌಡ ಪ್ರತಿಕ್ರಿಯೆ ನೀಡಿದರು. ಒಬ್ಬೊಬ್ಬರು ಹೋದ ಸಂದರ್ಭದಲ್ಲಿ ಒಂದೊಂದು ರೀತಿಯ ಅನುಭವವಾಗಿರಬಹುದು. ಆ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಾನೂ ಅಂಬರೀಶ್ ಮನೆಗೆ ಭೇಟಿ ನೀಡಿದ್ದೇನೆ, ತಿಂಡಿ ತಿಂದು ಬಂದಿದ್ದೇನೆ ಎಂದರು.
ಉದ್ವೇಗ ಸಲ್ಲ: ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಕುಮಾರಸ್ವಾಮಿ ಸರ್ಕಾರದಿಂದ ಸಿಗುತ್ತಿರುವ ಸಹಕಾರ ಹಿಂದಿನ ಯಾವುದೇ ಸರ್ಕಾರದ ಅವಧಿಯಲ್ಲೂ ದೊರಕಿರಲಿಲ್ಲ. ಜಿಲ್ಲೆಯ ನೀರಾವರಿ, ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ನಿಖಿಲ್ ಅವರನ್ನು ಬೆಂಬಲಿಸುವ ಅವಶ್ಯಕತೆ ಇದೆ. ನಾವು ಯಾವಾಗಲೂ ಅಭಿವೃದ್ಧಿ ಪರವಾಗಿರಬೇಕೇ ವಿನಃ ತಾತ್ಕಾಲಿಕ ಉದ್ವೇಗಕ್ಕೆ ಒಳಗಾಗಬಾರದು ಎಂದರು.
ಆಬಲವಾಡಿ ಗ್ರಾಪಂ ಅಧ್ಯಕ್ಷ ಸುರೇಶ, ಸದಸ್ಯರಾದ ಸುಶೀಲ್ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಜಿ. ರಾಮಚಂದ್ರ, ಮುಖಂಡರಾದ ನರಸೇಗೌಡ, ಕುಷಾ, ಚಿಕ್ಕೋನಹಳ್ಳಿ ಜಗದೀಶ ಇತರರಿದ್ದರು.