Advertisement

ಬೆಂಗಳೂರಿಗೆ ಮುಖಂಡರ ದೌಡ್‌

04:08 PM Apr 07, 2018 | |

ದಾವಣಗೆರೆ: ನಾಮಪತ್ರ ಸಲ್ಲಿಕೆ ಆರಂಭಕ್ಕೆ ಇನ್ನು 11 ದಿನ ಬಾಕಿ ಇದ್ದು, ರಾಜಕೀಯ ನಾಯಕರು ಇದೀಗ ಟಿಕೆಟ್‌ ಫೈನಲ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯ ಬಹುತೇಕ ಮುಖಂಡರು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದಾರೆ.

Advertisement

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು, ಹಿರಿಯ ನಾಯಕರು ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದು, ಈಗಾಗಲೇ ಟಿಕೆಟ್‌ ಪಕ್ಕಾ ಆಗಿರುವವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಟಿಕೆಟ್‌ ಕುರಿತು ರಾಜಧಾನಿಯಲ್ಲಿ ನಡೆಯುತ್ತಿರುವ ಸಭೆ, ಮಾತುಕತೆಯ ವಿವರ ಪಡೆದರು. ಇತ್ತ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನ ಆಚರಿಸಿದ ಆ ಪಕ್ಷದ ನಾಯಕರು, ಮುಷ್ಟಿ ಧಾನ್ಯ ಅಭಿಯಾನದಲ್ಲಿ ಪಾಲ್ಗೊಂಡರು.

ಜಗಳೂರಿನಲ್ಲಿ ಶಾಸಕ ಎಚ್‌.ಪಿ. ರಾಜೇಶ್‌ ತೋರಣಗಟ್ಟೆ, ಬಿದರಕೆರೆ, ಮುಷ್ಟೂರು, ದೊಣ್ಣೆಹಳ್ಳಿಯ ಬೂತ್‌ ಮಟ್ಟದ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸುವ ಜೊತೆ ಜೊತೆಗೆ ಪ್ರಚಾರ ಸಹ ಕೈಗೊಂಡರು.

ಹರಪನಹಳ್ಳಿಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಭಾಗವಹಿಸಿದ್ದರು. ಮತ್ತೋರ್ವ ಆಕಾಂಕ್ಷಿ ಎನ್‌. ಕೊಟ್ರೇಶ್‌ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. 

Advertisement

ಶಾಸಕ ಎಂ.ಪಿ. ರವೀಂದ್ರ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಿಗೆ ಅವರ ಮಕ್ಕಳು, ಪಕ್ಷದ ಇತರೆ ನಾಯಕರು ಪ್ರಚಾರ ಕೈಗೊಂಡರು. ಹೊನ್ನಾಳಿಯಲ್ಲೂ ಸಹ ಟಿಕೆಟ್‌ ಆಕಾಂಕ್ಷಿಗಳು ಇರಲಿಲ್ಲ. ಬದಲಿಗೆ ಇತರೆ ನಾಯಕರು ಪ್ರಚಾರ ಕೈಗೊಂಡರು. ಹರಿಹರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಹರಿಹರ ನಗರ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡರು.

ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಪ್ರಮುಖ ನಾಯಕರು ಬೆಂಗಳೂರಲ್ಲಿಯೇ ಬೀಡು ಬಿಟ್ಟಿದ್ದು, ಇತ್ತ ಇತರೆ ನಾಯಕರು ಅಲ್ಲಿನ ಪ್ರತೀ ಬೆಳವಣಿಗೆಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಿಧಾನಸಭಾ ಚುನಾವಣೆ ಇದೀಗ ಹೊಸ ಮಗ್ಗುಲಿಗೆ ಹೊರಳುತ್ತಿದೆ. ಇದುವರೆಗೆ ಕೆಲ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು. ಆದರೆ, ಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಅವರನ್ನೂ ಕಾಡುತ್ತಿತ್ತು. ಇದೀಗ ಟಿಕೆಟ್‌ ಯಾರಿಗೆ ಎಂಬ ಖಾತರಿ ಮಾಡಿಕೊಳ್ಳುವ ಸಮಯ ಬಂದಿದೆ. ಇಷ್ಟು ದಿನದ  ಕೌತುಕಕ್ಕೆ ತೆರೆಬೀಳುವ ದಿನಗಳು ಹತ್ತಿರ ಆಗುತ್ತಿವೆ. 

ಇದು ಕೇವಲ ಟಿಕೆಟ್‌ ಆಕಾಂಕ್ಷಿಗಳಿಗೆ ಮಾತ್ರವಲ್ಲದೆ ಅವರ ಹಿಂಬಾಲಕರ ಎದೆಬಡಿತವನ್ನೂ ಸಹ ಹೆಚ್ಚಿಸುತ್ತಿದೆ. ಇದೀಗ ಎಲ್ಲಾ ಪಕ್ಷದ ಪ್ರಮುಖರು ತಮ್ಮ ಹುರಿಯಾಳುಗಳ ಅಂತಿಮ ಪಟ್ಟಿ ತಯಾರಿಕೆಯ ಕಸರತ್ತು ಆರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ ಅಂತಿಮ ಪಟ್ಟಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಆಗ ರಾಜಕೀಯ ಚಟುವಟಿಕೆ ಮತ್ತೂಂದು ತಿರುವು ಪಡೆಯಲಿದೆ. 

ಬೆಂಗಳೂರು ಸಮಾವೇಶಕ್ಕೆ ಅಣಿ ಚುನಾವಣೆಗೆ ಕಾಂಗ್ರೆಸ್‌ನ ತಾಲೀಮು ಭರ್ಜರಿಯಾಗಿದೆ. ಇದುವರೆಗೆ ರಾಹುಲ್‌ ಗಾಂಧಿ ರಾಜ್ಯದ ವಿವಿಧ ಭಾಗಗಳಲ್ಲಿ ರೋಡ್‌ ಶೋ, ಸಮಾವೇಶ ಮಾಡಿದ್ದರು. ಇದೀಗ ಬೆಂಗಳೂರಲ್ಲಿ ಬೃಹತ್‌ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಜಿಲ್ಲಾಮಟ್ಟದ ನಾಯಕರು ತಮ್ಮ ಬೆಂಬಗಲಿರ ಜೊತೆ ಬೆಂಗಳೂರಿಗೆ ತೆರಳಿ, ಅಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next