Advertisement

ಜಿಲ್ಲಾ ಪಂಚಾಯತ್‌ ಆಡಳಿತಕ್ಕೆ ಬಂದ ನಾಯಕರ ವೈಮನಸ್ಸು !

03:22 PM Oct 05, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ಕಾಂಗ್ರೆಸ್‌ ನಾಯಕರ ಮಧ್ಯೆ ಇರುವ ವೈಮನಸ್ಸು, ಜಿಪಂ ಆಡಳಿತದ ಪಡಸಾಲೆಗೆ ಬಂದಿದೆ. ಕಳೆದ ವರ್ಷ ಈ ವೈಮನಸ್ಸು-  ಪ್ರತಿಷ್ಠೆಯಿಂದಲೇ ಸುಮಾರು 2.50 ಕೋಟಿಯಷ್ಟು ಅನುದಾನ ಲ್ಯಾಪ್ಸ್‌ ಆಗಿದ್ದರೂ ಜಿಪಂ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಹೌದು, ಜಿಲ್ಲೆಯ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಎಸ್‌.ಆರ್‌. ಪಾಟೀಲ, ಆರ್‌.ಬಿ. ತಿಮ್ಮಾಪುರ ಅವರ ಮಧ್ಯೆ ಇರುವ ರಾಜಕೀಯ ವೈಮನಸ್ಸು, ಮತ್ತೊಮ್ಮೆ ಜಿಪಂ ಸದಸ್ಯರ ಮೂಲಕ ಹೊರ ಬಿದ್ದಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಸದಸ್ಯರಲ್ಲೇ ಒಡಕು: ಜಿಲ್ಲಾ ಪಂಚಾಯತ್‌ನಲ್ಲಿ ಸ್ಪಷ್ಟ ಬಹುಮತ ಪಡೆಯದಿದ್ದರೂ ಹಲವು ರಾಜಕೀಯ ತಂತ್ರಗಾರಿಕೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ಹಲವು ಬಾರಿ ಎಡವುತ್ತಿದೆ. ತಪ್ಪು ಮಾಡಿದವರಿಗೆ ನೋಟಿಸ್‌ ಮೂಲಕ ಇಲ್ಲವೇ ಎಚ್ಚರಿಕೆಯ ಮೂಲಕ ತಿಳಿಹೇಳಬೇಕಾದ ಪಕ್ಷದ ಜಿಲ್ಲಾ ಅಧ್ಯಕ್ಷರು ನಿರ್ಲಿಪ್ತಗೊಂಡಿದ್ದಾರೆ. ಅವರ ಮಾತು ಯಾರೂ ಕೇಳದಂತಹ ಪರಿಸ್ಥಿತಿಯೂ ಕಾಂಗ್ರೆಸ್‌ನಲ್ಲಿ ವಾತಾವರಣ ಮನೆ ಮಾಡಿದೆ ಎಂಬ ಅಸಮಾಧಾನ ಕೇಳಿಬರುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರಕ್ಕೆ ಬರಲಿಲ್ಲ ಎಂದು ಬಹಿರಂಗವಾಗಿ ಗುಡುಗಿದ್ದ ಹುನಗುಂದದ ಕಾಶಪ್ಪನವರ, ಎಸ್‌.ಆರ್‌. ಪಾಟೀಲ ಮತ್ತು ತಿಮ್ಮಾಪುರ ವಿರುದ್ಧ ಕೆಪಿಸಿಸಿಗೂ ದೂರು ಕೊಟ್ಟಿದ್ದರು. ಇದಕ್ಕೆ ಉತ್ತರಿಸಿದ್ದ ಎಸ್‌.ಆರ್‌. ಪಾಟೀಲ, ತಿಮ್ಮಾಪುರ ನಾವು ಬಾದಾಮಿ ಕ್ಷೇತ್ರದ ಉಸ್ತುವಾರಿಯಲ್ಲಿದ್ದೇವು. ಹೀಗಾಗಿ ಹುನಗುಂದದ ಪ್ರಚಾರಕ್ಕೆ ಹೋಗಿಲ್ಲ ಎಂದಿದ್ದರು. ಆದರೂ, ಅಸಮಾಧಾನ ಬಹಿರಂಗವಾಗಿ ಹೊರ ಹೊಮ್ಮುತ್ತಲೇ ಇತ್ತು. ಇನ್ನೇನು ಕಾಂಗ್ರೆಸ್‌ನ ಈ ಅಸಮಾಧಾನ ಬಗೆಹರಿದಿದೆ ಎನ್ನುವಷ್ಟರಲ್ಲಿ ಅದು ಜಿಪಂ ಸದಸ್ಯರ ಮೂಲಕ ಹೊರಬಿದ್ದಿದೆ.

ಒಟ್ಟು 17 ಜನ ಕಾಂಗ್ರೆಸ್‌ ಸದಸ್ಯರಲ್ಲಿ ಮೂರು ಬಣಗಳಿವೆ. ಅದರಲ್ಲಿ ಅಧ್ಯಕ್ಷರದ್ದೇ ಪ್ರತ್ಯೇಕ ಬಣದಂತಾಗಿದೆ. ಜಿಪಂ ಅಧ್ಯಕ್ಷರೂ ಕೂಡ ತಮ್ಮ ಪಕ್ಷದ ಸದಸ್ಯರ ವಿಶ್ವಾಸ ಗಳಿಸುವಲ್ಲಿ ಹಿಂದೇಟು ಹಾಕಿದ್ದಾರೆ. ಯಾವುದೇ ತಾಲೂಕು, ಕ್ಷೇತ್ರಗಳಲ್ಲಿ ಕಾರ್ಯಕ್ರಮಕ್ಕೆ ಹೋದರೂ ಆ ಭಾಗದ ಸದಸ್ಯರನ್ನು ಸಂಪರ್ಕಿಸುವುದಿಲ್ಲ ಎಂಬ ಅಸಮಾಧಾನ ಅವರದೇ ಪಕ್ಷದ ಸದಸ್ಯರಲ್ಲಿದೆ. ಈ ಅಸಮಾಧಾನ ತಣಿಸಬೇಕಾದ ಜಿಪಂ ಅಧ್ಯಕ್ಷರೂ ಆ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬ ಮಾತು ಕೇಳಿ ಬಂದಿದೆ.

Advertisement

ಸೋತರೂ ಕಾಣದ ಒಗ್ಗಟ್ಟು: ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್‌, ಲೋಕಸಭೆಗೆ ತಯಾರಿ ಮಾಡಿಕೊಳ್ಳಲು ಸಂಘಟಿತರಾಗದೇ ಮತ್ತಷ್ಟು ಭಿನ್ನಮತ ಜೋರಾಗಲು ನಾಯಕರ ವೈಮನಸ್ಸೇ ಕಾರಣ ಎನ್ನಲಾಗುತ್ತಿದೆ. ಜಮಖಂಡಿ ವಿಧಾನಸಭೆ ಉಪಚುನಾವಣೆ, ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಬದಲು ಭಿನ್ನಮತ ಹೆಚ್ಚಾಗುತ್ತಿದೆ. ಪಕ್ಷದ ಈ ಭಿನ್ನಮತ, ಆಡಳಿತ ಯಂತ್ರದ ಮೇಲೂ ಪರಿಣಾಮ ಬೀರುತ್ತದೆ ಎಂಬು ಸಹಜ ಅರಿವು ಯಾರೂ ಮಾಡಿಕೊಳ್ಳುತ್ತಿಲ್ಲ ಎಂಬ ಬೇಸರ ಜಿಲ್ಲೆಯ ಪ್ರಜ್ಞಾವಂತರದ್ದು. 

ಡಿಸಿಸಿ ಬ್ಯಾಂಕ್‌ಗೂ ವಿಸ್ತರಿಸುವ ಸಾಧ್ಯತೆ: ಕಾಂಗ್ರೆಸ್‌ ಆಡಳಿತ ಇರುವ ಜಿಪಂನ ಈ ಅಸಹಕಾರ ನೀತಿ, ಅಸಮಾಧಾನ ಡಿಸಿಸಿ ಬ್ಯಾಂಕ್‌ ಆಡಳಿತದ ಮೇಲೂ ಬೀರುವ ಸಾಧ್ಯತೆ ದಟ್ಟವಾಗಿದೆ. ಮೊದಲಿನಿಂದಲೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ವಿಜಯಾನಂದ ಕಾಶಪ್ಪನವರ, ಹಲವು ಬಾರಿ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ಬೇಡಿಕೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಜಿಪಂನಲ್ಲಿ ಅಧ್ಯಕ್ಷರಾಗಿರುವ ತಮ್ಮ ಪತ್ನಿ ವೀಣಾಗೆ ಅಧಿಕಾರ ನಡೆಸಲು ಅಸಹಕಾರ ತೋರುವ ಕಾಂಗ್ರೆಸ್‌ ಸದಸ್ಯರು, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸವೆಂಬ ಸೂತ್ರಕ್ಕೆ ಮುಂದಾದರೆ, ಇತ್ತ ತಾವು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಸೂತ್ರ ಹಣೆಯಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ, ಕಾಂಗ್ರೆಸ್‌ನ ಈ ಒಳ ಜಗಳ ಹಾಗೂ ಪ್ರತಿಷ್ಠೆಯ ರಾಜಕಾರಣಕ್ಕೆ, ಕಳೆದ ವರ್ಷದಂತೆ ಈ ಬಾರಿ ಅನುದಾನ ಮರಳಿ ಹೋಗುವ ಸಾಧ್ಯತೆ ಇದೆ.

ಜಿಪಂ ಅಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ವೈಮನಸ್ಸು ಇರುವುದು ನನಗೆ ಹೇಳಿಲ್ಲ. ಆದರೆ,
ಅವರಲ್ಲಿ ಯಾವ ವಿಷಯಕ್ಕೆ ಸಮಸ್ಯೆ ಇದೆ ಎಂಬುದರ ಬಗ್ಗೆ ತಿಳಿದಿಲ್ಲ. ಈ ಕುರಿತು ಜಿಲ್ಲೆಯ ಎಲ್ಲ ಹಿರಿಯ ಮುಖಂಡರು ಹಾಗೂ ಪಕ್ಷದ ಜಿಪಂ ಸದಸ್ಯರನ್ನು ಬೆಂಗಳೂರಿಗೆ ಕರೆಸಿ ಕೆಪಿಸಿಸಿ ಅಧ್ಯಕ್ಷರು-ಕಾರ್ಯಾಧ್ಯಕ್ಷರ ಸಮ್ಮುಖದಲ್ಲೇ ಪರಿಹಾರ ಕಂಡುಕೊಳ್ಳುತ್ತೇವೆ.
ಎಂ.ಬಿ. ಸೌದಾಗರ,
ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ

ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next