Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಡುವಿನ ನೇರ ಸ್ಪರ್ಧೆಯಿಂದಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ರೋಡ್ ಶೋ, ಪಾದಯಾತ್ರೆ ಮೂಲಕ ಮತಯಾಚನೆಯಲ್ಲಿ ತೊಡಗಿದ್ದರೆ, ಕ್ಷೇತ್ರದ ಇನ್ನಿತರೆ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕರಪತ್ರವನ್ನು ಹಿಡಿದು ಮತದಾರರ ಮನೆ ಮನೆಗೆ ಎಡತಾಕುತ್ತಿದ್ದಾರೆ.
Related Articles
Advertisement
ಇನ್ನು ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ವೆಂಕಟೇಶ್ ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿದ್ದರೆ, ಮೈತ್ರಿ ಪಕ್ಷ ಜೆಡಿಎಸ್ ಶಾಸಕ ಕೆ.ಮಹದೇವ್ ಅವರ ಮನೆಗೆ ಸ್ವತಃ ಅಭ್ಯರ್ಥಿ ವಿಜಯಶಂಕರ್ ಅವರು ಭೇಟಿ ನೀಡಿ ಬೆಂಬಲ ಕೋರಿದ್ದರೂ ಅವರು ಈವರೆಗೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿಲ್ಲ.
ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಕೆಲಸ ಮಾಡುತ್ತಿದ್ದು, ಈ ಕ್ಷೇತ್ರದ ಶಾಸಕರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಅವರು ಇನ್ನಷ್ಟೆ ತೊಡಗಿಸಿಕೊಳ್ಳಬೇಕಿದೆ.
ಸಚಿವರೇ ನಾಪತ್ತೆ: ಮುಖ್ಯವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ.ಟಿ.ದೇವೇಗೌಡ ಅವರು ಕ್ಷೇತ್ರ ಕಾಂಗ್ರೆಸ್ ಪಾಲಾದ ಹಿನ್ನೆಲೆಯಲ್ಲಿ ಆರಂಭದಿಂದಲೂ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ ತೋರುತ್ತಿಲ್ಲ. ಈವರೆಗೆ ಮೈಸೂರಿನಿಂದ ದೂರವೇ ಇದ್ದ ಜಿ.ಟಿ.ದೇವೇಗೌಡ ಅವರು ಮೈಸೂರಿಗೆ ಬಂದಿದ್ದರೂ ಚುನಾವಣಾ ಕಾರ್ಯದಿಂದ ದೂರವೇ ಉಳಿದಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಘೋಷಣೆಯಾದ ಬಳಿಕ ಮೂರ್‍ನಾಲ್ಕು ಬಾರಿ ಮೈಸೂರಿಗೆ ಬಂದು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಕಾರ್ಯಕರ್ತರ ಸಭೆ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಮತ್ತೂಬ್ಬ ಸಚಿವರಾದ ಸಾ.ರಾ.ಮಹೇಶ್ ಅವರೊಂದಿಗೂ ಚರ್ಚೆ ಮಾಡಿದ್ದಾರೆ.
ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಾಗ ಯಾರನ್ನು ಅಭ್ಯರ್ಥಿ ಮಾಡುತ್ತೇವೆ ಎಂಬ ಬಗ್ಗೆ ನಮ್ಮೊಂದಿಗೆ ಆರಂಭದಲ್ಲೇ ಚರ್ಚಿಸಲಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ಸಚಿವ ಸಾ.ರಾ.ಮಹೇಶ್ ಮಾತುಕತೆ ನಡೆಸಿದ್ದರು.
ಈವರೆಗೆ ಆ ಮಾತುಕತೆಯ ವಿವರಗಳ ಬಗ್ಗೆ ತಿಳಿದಿಲ್ಲ. ಜೊತೆಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಕೆ.ವೆಂಕಟೇಶ್, ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ್ಯಾರೂ ತಮ್ಮೊಂದಿಗೆ ಚರ್ಚೆಗೆ ಮುಂದಾಗದಿರುವುದರಿಂದ ತಾವಾಗೇ ಏಕೆ ತೊಡಗಿಸಿಕೊಳ್ಳಬೇಕು ಎಂದು ಜಿಟಿಡಿ ಕೂಡ ಮುಗುಮ್ಮಾಗಿದ್ದಾರೆ.
ಜೊತೆಗೆ ವಿಧಾನಸಭೆ ಚುನಾವಣೆ ನಡೆದು ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಹೋರಾಟ ನಡೆಸಿದವರು ಈಗ ಏಕಾಏಕಿ ಮೈತ್ರಿ ಅಭ್ಯರ್ಥಿಗೆ ಮತ ಕೇಳಿ ಎಂದರೆ ಕಷ್ಟವಾಗುತ್ತದೆ. ಎರಡೂ ಪಕ್ಷದ ನಾಯಕರುಗಳು ಕಾರ್ಯಕರ್ತರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕು ಎಂಬ ಮಾತು ಕೇಳಿಬರುತ್ತಿದೆ.
* ಗಿರೀಶ್ ಹುಣಸೂರು