Advertisement
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯ ವೇಳೆ ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಬಿಜೆಪಿ ಸದಸ್ಯರು “ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು. ಇದರಿಂದ ಸ್ವಲ್ಪವೂ ವಿಚಲಿತರಾಗದ ರಾಹುಲ್ ಕೂಡಲೇ “ಜೈ ಸಂವಿಧಾನ’ ಎಂದು ತಿರುಗೇಟು ನೀಡಿದರು. ಒಟ್ಟು 1 ಗಂಟೆ 40 ನಿಮಿಷ ರಾಹುಲ್ ಮಾತನಾಡಿದರು. ವಿಪಕ್ಷ ನಾಯಕನಾಗಿ ರಾಹುಲ್‌ರ ಚೊಚ್ಚಲ ಭಾಷಣವನ್ನು ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ವಾದ್ರಾ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಇದೇ ವೇಳೆ, ಪ್ರಧಾನಿ ಮೋದಿ ಮತ್ತು ಸರಕಾರದ ಆದೇಶದ ಮೇರೆಗೆ ನನ್ನ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ನನ್ನ ವಿರುದ್ಧ 20+ ಕೇಸುಗಳನ್ನು ಹಾಕಲಾಗಿದೆ, 2 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ, ನನ್ನ ಮನೆಯನ್ನು ಕಿತ್ತುಕೊಳ್ಳಲಾಗಿದೆ, ಇ.ಡಿ. ಮೂಲಕ 55 ಗಂಟೆಗಳ ಕಾಲ ನನ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದನ್ನೂ ರಾಹುಲ್ ಪ್ರಸ್ತಾವಿಸಿದರು.
Related Articles
Advertisement
ಬಿಜೆಪಿಗೆ ಅಯೋಧ್ಯೆಯಿಂದಲೇ ಸ್ಪಷ್ಟ ಸಂದೇಶ
ತಮ್ಮ ಭಾಷಣದ ವೇಳೆ ಅಯೋಧ್ಯೆಯಿರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರಸ್ತಾವಿಸಿದ ರಾಹುಲ್, “ಬಿಜೆಪಿಯು ಅಯೋಧ್ಯೆಯಿಂದ ಹಿಡಿದು ದೇಶಾದ್ಯಂತ ಭಯವನ್ನು ಸೃಷ್ಟಿಸುತ್ತಾ ಸಾಗಿತ್ತು. ಅದೆಷ್ಟು ತೀವ್ರವಾಗಿತ್ತೆಂದರೆ, ಕೊನೆಗೆ ಶ್ರೀ ರಾಮನ ಜನ್ಮಭೂಮಿಯೇ ಬಿಜೆಪಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿತು. ಆ ಸಂದೇಶ ಇಂದು ನಿಮ್ಮ ಮುಂದೆಯೇ ಕುಳಿತಿದೆ’ ಎನ್ನುತ್ತಾ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್‌ರತ್ತ ಕೈತೋರಿಸಿದರು. ಜತೆಗೆ ಸೂಕ್ತ ಪರಿಹಾರ ನೀಡದೇ ಅಯೋಧ್ಯೆಯ ಸ್ಥಳೀಯರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ಸಣ್ಣಪುಟ್ಟ ಅಂಗಡಿಗಳು, ಮನೆಗಳನ್ನು ಧ್ವಂಸ ಮಾಡಿ, ಜನರನ್ನು ಬೀದಿ ಪಾಲು ಮಾಡಲಾಯಿತು. ಅಯೋಧ್ಯೆಯ ಜನರ ಭೂಮಿ ಕಸಿದುಕೊಂಡು, ಮನೆ, ಅಂಗಡಿ ನೆಲಸಮಗೊಳಿಸುವ ಮೂಲಕ ಮೋದಿ ಎಲ್ಲರಲ್ಲೂ ಭಯ ಸೃಷ್ಟಿಸಿದರು. ಇಷ್ಟೆಲ್ಲ ಮಾಡಿದ ಮೇಲೂ ರಾಮಮಂದಿರ ಉದ್ಘಾಟನೆಗೆ ಅಂಬಾನಿ -ಅದಾನಿಯನ್ನು ಕರೆದರೇ ವಿನಾ ಸ್ಥಳೀಯರಿಗೆ ಆಹ್ವಾನ ನೀಡಲಿಲ್ಲ. ಇವೆಲ್ಲವೂ ಅಯೋಧ್ಯೆ ಜನರ ಆಕ್ರೋಶಕ್ಕೆ ಕಾರಣವಾಯಿತು ಎಂದೂ ರಾಗಾ ಹೇಳಿದರು. ಇದೇ ವೇಳೆ, ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರಿಗೆ ಹಸ್ತಲಾಘವ ಮಾಡುವ ಮೂಲಕ ರಾಹುಲ್ ಬಿಜೆಪಿಗೆ ತಿರುಗೇಟು ನೀಡಿದರು.
ಮೋದಿ ಎಸ್ಕೇಪ್: ಮೋದಿಯವರು ಅಯೋಧ್ಯೆಯಲ್ಲಿ ಕಣಕ್ಕಿಳಿಯಲು ಯೋಚಿಸಿ 2 ಬಾರಿ ಸಮೀಕ್ಷೆ ನಡೆಸಿದ್ದರು. ಆದರೆ ಸಮೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದ ಕಾರಣ, ಅಯೋಧ್ಯೆಯಿಂದ ಎಸ್ಕೇಪ್ ಆಗಿ ವಾರಾಣಸಿಯಲ್ಲೇ ಸ್ಪರ್ಧಿಸಿದರು ಎಂದೂ ರಾಗಾ ವ್ಯಂಗ್ಯವಾಡಿದರು.
BJPಯವರಲ್ಲೂ ಮೋದಿಯಿಂದ ಭಯ ಸೃಷ್ಟಿ!
ಸದನಕ್ಕೆ ಬಂದಾಗ ಸಚಿವರಾದ ರಾಜನಾಥ್ ಸಿಂಗ್ ಮತ್ತು ಗಡ್ಕರಿ ಅವರು ನನ್ನನ್ನು ನೋಡಿಯೂ, ಕುಶಲೋಪರಿ ವಿಚಾರಿಸಲಿಲ್ಲ. ಮೋದಿ ಸಿಟ್ಟಾಗಬಹುದು ಎಂಬ ಭಯ ಅವರಿಗೆ. ಅಯೋಧ್ಯೆಯ ಜನರನ್ನು ಮಾತ್ರವಲ್ಲ, ಬಿಜೆಪಿಯವರಲ್ಲೇ ಮೋದಿ ಭಯ ಸೃಷ್ಟಿಸಿಟ್ಟಿದ್ದಾರೆ ಎಂದು ರಾಹುಲ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನನಗೆ ವಿಪಕ್ಷ ನಾಯಕನನ್ನು ಗಂಭೀರವಾಗಿ ಪರಿಗಣಿಸುವಂತೆ ಕಲಿಸಿದೆ’ ಎನ್ನುವ ಮೂಲಕ ತಿರುಗೇಟು ನೀಡಿದರು.
NEET ಶ್ರೀಮಂತರಿಗಾಗಿ ಮಾಡಿದ “ಕಮರ್ಷಿಯಲ್’ ಪರೀಕ್ಷೆ
ನೀಟ್ ಎನ್ನುವುದು ಶ್ರೀಮಂತ ವಿದ್ಯಾರ್ಥಿಗಳಿಗೆಂದೇ ರೂಪಿಸಲಾದ “ವಾಣಿಜ್ಯ’ ಪರೀಕ್ಷೆಯಾಗಿದೆಯೇ ವಿನಾ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆಂದು ಮಾಡಿದ್ದಲ್ಲ ಎಂಬ ಗಂಭೀರ ಆರೋಪವನ್ನು ರಾಹುಲ್ ಮಾಡಿದ್ದಾರೆ. ನೀಟ್ ಅಕ್ರಮ ಕುರಿತು ಸರಕಾರದ ವಿರುದ್ಧ ಮುಗಿಬಿದ್ದ ಅವರು, 7 ವರ್ಷಗಳಲ್ಲಿ ಒಟ್ಟು 70 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ಸರಕಾರ ಈ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ. ಏಕೆಂದರೆ ಅದಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಸಕ್ತಿಯಿಲ್ಲ ಎಂದು ಕಿಡಿಕಾರಿದ್ದಾರೆ. ವೃತ್ತಿಪರ ಪರೀಕ್ಷೆಗಳನ್ನೆಲ್ಲ ಕಮರ್ಷಿಯಲ್ ಪರೀಕ್ಷೆಗಳಾಗಿ ಬದಲಿಸಲಾಗಿದೆ. ನೀಟ್‌ನಲ್ಲಿ ಟಾಪ್ ರ್‍ಯಾಂಕ್ ಪಡೆದರೂ, ಹಣವಿಲ್ಲ ಎಂದಾದರೆ ಆ ವಿದ್ಯಾರ್ಥಿಗೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗ ವಿದ್ಯಾರ್ಥಿಗಳು ಪರೀಕ್ಷೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ ಎಂದೂ ರಾಗಾ ಹೇಳಿದ್ದಾರೆ.
ಅಗ್ನಿವೀರರನ್ನು ಬಳಸಿ, ಬಿಸಾಡುತ್ತಿರುವ ಸರಕಾರ
ಮೋದಿಯವರ ಆಜ್ಞೆಯ ಮೇರೆಗೆ ಅಗ್ನಿವೀರ ಯೋಜನೆ ತರಲಾಗಿದೆ. ಅಗ್ನಿವೀರ ಎನ್ನುವುದು ಬಳಸಿ-ಬಿಸಾಕುವ ಕೆಲಸವಿದ್ದಂತೆ. ಒಬ್ಬ ಯೋಧನಿಗೆ ಪಿಂಚಣಿ ಸಿಗುತ್ತದೆ, ಮತ್ತೂಬ್ಬನಿಗೆ ಸಿಗಲ್ಲ. ನೀವು ಯೋಧರ ನಡುವೆಯೇ ವಿಭಜನೆ ಸೃಷ್ಟಿ ಮಾಡಿದ್ದೀರಿ ಎಂದು ರಾಹುಲ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜನಾಥ್ ಸಿಂಗ್, “ಕಾಂಗ್ರೆಸ್ ನಾಯಕ ಸಂಸತ್‌ನಲ್ಲಿ ತಪ್ಪು ಮಾಹಿತಿ ಹಬ್ಬುತ್ತಿದ್ದಾರೆ’ ಎಂದು ಕಿಡಿಕಾರಿದರು.
ರಾಹುಲ್ ವಿರುದ್ಧ ಕ್ರಮ ?
ಸದನದಲ್ಲಿ ಹಿಂದೂ-ವಿರೋಧಿ ಹೇಳಿಕೆ ಯನ್ನು ನೀಡಿರುವ ರಾಹುಲ್ ಗಾಂಧಿ ವಿರುದ್ಧ ಸ್ಪೀಕರ್ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಗ್ನಿವೀರರ ಕುರಿತು ಸದನಕ್ಕೆ ರಾಹುಲ್ ತಪ್ಪು ಮಾಹಿತಿ ನೀಡು ತ್ತಿದ್ದಾರೆ. 158 ಸಂಸ್ಥೆಗಳ ಸಲಹೆ ಪಡೆದು ಈ ಯೋಜನೆ ಜಾರಿ ಮಾಡಲಾಗಿದೆ. ಹುತಾತ್ಮ ಅಗ್ನಿವೀರರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರವನ್ನೂ ನೀಡಲಾಗುತ್ತಿದೆ. ರಾಹುಲ್ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು.
-ರಾಜನಾಥ್ ಸಿಂಗ್, ರಕ್ಷಣ ಸಚಿವ
ಇಂದು, ನಾಳೆ ಮೋದಿ ಉತ್ತರ
ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ್ದ ಭಾಷಣಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ, ಬುಧವಾರ ರಾಜ್ಯಸಭೆಯಲ್ಲಿ ವಂದನಾ ಭಾಷಣ ಮಾಡಲಿದ್ದಾರೆ. ಈ ವೇಳೆ ವಿಪಕ್ಷ ಗಳ ಹಲವು ಆರೋಪಗಳಿಗೂ ತಿರುಗೇಟು ನೀಡಲಿದ್ದಾರೆ.