Advertisement
ಬದುಕು ಸುಂದರ ಎನ್ನುವುದು ಎಷ್ಟು ನಿಜ. ಹಾಗೇ ಸಂಕೀರ್ಣ ಕೂಡ ಹೌದು. ಕಣ್ಣ ಮುಂದಿರುವ ಭೂಮಿಯ ಮೇಲಿನ ಬದುಕನ್ನು ಬಿಟ್ಟು ಕಲ್ಪನೆಯ ಸ್ವರ್ಗಕ್ಕೆ ಹಂಬಲಿಸೋದರಲ್ಲಿ ಅರ್ಥವಿಲ್ಲ. ಸುಖ ಬಯಸದವರು ಯಾರೂ ಇಲ್ಲ. ನಮ್ಮ ಮಧ್ಯಮ ವರ್ಗದ ಮನೆಯ ಒಂದು ಬದಿಯಲ್ಲಿರುವ ಬಂಗಲೆಯಂತಹ ಮನೆಯವರನ್ನು ನೋಡಿ ಹಲುಬುತ್ತೇವೆ. ಆದರೆ ಇನ್ನೊಂದು ಬದಿಯಲ್ಲಿರುವ ಹರುಕಲು ಗುಡಿಸಲಿನವನನ್ನು ನೋಡಿ ಕನಿಕರ ವ್ಯಕ್ತಪಡಿಸುವುದಿಲ್ಲ. ಬೇವು ಬೆಲ್ಲ ಮಿಶ್ರ ಮಾಡಿ ಬೆಲ್ಲವನ್ನು ಮಾತ್ರ ತಿನ್ನುವಂತಾಗಬೇಕು. ಇಂತಹ ಬದುಕು ಎಲ್ಲರಿಗೂ ಇಷ್ಟ. ಬದುಕೊಂದು ಈರುಳ್ಳಿಯಂತೆ. ಒಂದೊಂದೇ ಪದರ ಕಳಚಿದಷ್ಟು ಮತ್ತೊಂದು, ಕೊನೆಯ ಪದರ ತೆರೆಯುವಷ್ಟರಲ್ಲಿ ನಾವೇ ಇಲ್ಲ.
ಯೌವನ, ಅಧಿಕಾರ, ಹಣ ಎಂಬ ಮೂರು ಮದಗಳು ನಮ್ಮನ್ನು ಸಾಮಾನ್ಯವಾಗಿ ಕಾಡುತ್ತವೆ. ಯೌವನದ ಮದದಲ್ಲಿ ಅಡ್ಡದಾರಿ ಹಿಡಿದರೆ, ಹಣದ ಮದದಲ್ಲಿ ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಕಾಡುತ್ತದೆ. ಅಧಿಕಾರವೂ ಯಾರನ್ನೂ ಲೆಕ್ಕಿಸಬೇಕಿಲ್ಲ ಎಂಬ ಭಾವ ಬೆಳೆಸುತ್ತದೆ. ಯಾರು ಇವುಗಳ ದಾಸರಾಗುತ್ತಾರೋ ಅವರ ವ್ಯಕ್ತಿತ್ವದ ಅಧಃಪತನವಾಗುತ್ತದೆ. ಆದರೆ ಈ ವಿಚಾರಗಳನ್ನು ಉತ್ತಮ ಕಾರ್ಯಕ್ಕಾಗಿ ಬಳಸಿದರೆ ಬದುಕಿನಲ್ಲಿ ಯಶಸ್ವಿಯಾಗಬಹುದು. ಇತಿ ಮಿತಿ ಇರಲಿ
ಎತ್ತರಕ್ಕೆ ಬೆಳೆದಿರುವುದು ಬಾಗಲೇಬೇಕು. ಬಾಗಿದ್ದು ಬೀಳಲೇಬೇಕು. ಈ ನಿಜ ಸಂಗತಿಯನ್ನು ಅರಿತಾಗ ನಮ್ಮ ಬದುಕು ಇತಿಮಿತಿಯಲ್ಲಿ ನಡೆಯುತ್ತದೆ. ಸಕಲ ಜೀವರಾಶಿಗಳಲ್ಲಿ ಶ್ರೇಷ್ಠ ಎನಿಸಿರುವ ಮಾನವ ಜಿವನವನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಇದನ್ನು ತಿಳಿದವರು ಸದಾ ಮನುಷ್ಯ ಸಂಬಂಧಗಳನ್ನು ಕಟ್ಟುವ ಸದಾಶಯದಿಂದ ಬದುಕುತ್ತಾರೆ. ಇಂತಹ ಮನೋಭಾವ ಇಲ್ಲವಾದರೆ ಅಹಂನಿಂದಾಗಿ ಪ್ರತಿನಿತ್ಯ ಸಂಕಟ ಎದುರಿಸುವಂತಾಗುತ್ತದೆ. ಪರಿವರ್ತನೆ ಜಗದ ನಿಯಮ. ನಾವು ಕೂಡ ಪರಿವರ್ತನೆಯ ಕಡೆ ಸಾಗಬೇಕೇ ವಿನಾ ಸಮಾಪ್ತಿಯ ಕಡೆಗಲ್ಲ. ಜಗತ್ತಿನ ಇಂದಿನ ವಿದ್ಯಮಾನಗಳು ಸಮಾಪ್ತಿಯೆಡೆಗೆ ಕೊಂಡೊಯ್ಯುತ್ತಿವೆ. ಇದರಿಂದ ಮೌಲ್ಯಗಳು ಕುಸಿಯುತ್ತಿವೆ.
Related Articles
ಎಲ್ಲವನ್ನು, ಎಲ್ಲರನ್ನೂ ಮೀರಿ ಬದುಕಬೇಕೆಂಬ ಆಸೆ. ಹಾಗಾಗಿ ನಾವು ಲಗಾಮಿಲ್ಲದ ಕುದುರೆಯಂತೆ ಓಡುತ್ತೇವೆ. ಸ್ವ-ವಿಮರ್ಶೆಯ ಮನೋಭಾವ ಬೆಳೆಸಿಕೊಂಡಾಗ ಆತ ಯಾರನ್ನೂ ದೂರಲಾರ, ತನ್ನ ಬದುಕಲ್ಲಿ ಏನೇ ನಡೆದರೂ ಅದು ತನ್ನಿಂದಲೇ ನಡೆದಿದೆ ಎನ್ನುವ ಧೋರಣೆ ತಳೆಯುತ್ತಾನೆ. ಸ್ವ-ವಿಮರ್ಶೆ ಎಂಬುದೊಂದು ಆತ್ಮಾವಲೋಕನದ ಘಟ್ಟ, ಇದೊಂದು ಆರೋಗ್ಯಕರ ಚಿಂತನೆ, ಇಂಥ ಚಿಂತನೆ ಬೆಳೆಸಿಕೊಂಡವನು ಎಲ್ಲರನ್ನೂ ಅವರಂತೆ ಕಾಣುತ್ತಾನೆ, ಬೇಡದ ಆಲೋಚನೆಗಳಿಗೆ ಲಗಾಮು ಹಾಕಿ ಮನಸ್ಸೆಂಬ ಕುದುರೆಯನ್ನು ಸ್ವಪಥದಲ್ಲಿ ಚಲಿಸುವಂತೆ ಮಾಡುತ್ತಾನೆ.
Advertisement
ಗಣೇಶ ಕುಳಮರ್ವ