ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅತೀ ಜಿದ್ದಾಜಿದ್ದಿ ಹಾಗೂ ಭಾರೀ ಪೈಪೋಟಿಯ ಇತಿಹಾಸ ಹೊಂದಿರುವ ಹರಿಹರ ವಿಧಾನಸಭಾ ಕ್ಷೇತ್ರದ ಮತದಾರರ ಲೆಕ್ಕಾಚಾರದ ನಾಡಿಮಿಡಿತ ಊಹೆಗೂ ನಿಲುಕದ್ದು. ಹಾಗಾಗಿ ಈ ಕ್ಷೇತ್ರದಲ್ಲಿ ಇದೇ ಪಕ್ಷ ಲೀಡ್ ಪಡೆಯುತ್ತದೆ ಎಂದು ಅಂದಾಜಿಸುವುದು ಕಠಿಣ.
ಸಾಕಷ್ಟು ಜಿದ್ದಾಜಿದ್ದಿನ ರಾಜಕೀಯದ ಇತಿಹಾಸ ಹೊಂದಿರುವ ಹರಿಹರ ವಿಧಾನಸಭಾ ಕ್ಷೇತ್ರದ ಮತದಾರರ ಮನದ ಲೆಕ್ಕಾಚಾರ ಬಲು ಪಕ್ಕಾ. ಹಾಗಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇದೇ ಪಕ್ಷ ಖಚಿತವಾಗಿಯೇ ಲೀಡ್ ಪಡೆದೇ ತೀರುತ್ತದೆ ಎನ್ನುವಂತಿಲ್ಲ. ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು ತಮ್ಮದೇ ಲೆಕ್ಕಾಚಾರದ ಆಧಾರದಲ್ಲಿ ತಮಗೆ ಇಷ್ಟೇ ಲೀಡ್ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿವೆ. ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 1,04,184 ಪುರುಷರು, 1,03,970 ಮಹಿಳೆಯರು ಹಾಗೂ 16 ಇತರರು ಒಳಗೊಂಡಂತೆ 2,08,170 ಮತದಾರರು ಇದ್ದಾರೆ. ಏ.23 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ 80,404 ಪುರುಷರು, 74,485 ಮಹಿಳೆಯರು ಹಾಗೂ 6 ಇತರೆ ಮತದಾರರು ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ. 74.41 ಮತದಾನವಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ 2,00,521 ಮತದಾರರಲ್ಲಿ 1,45,845 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆಗ ಶೇ. 72.23 ಮತದಾನವಾಗಿತ್ತು. 2014ರ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಶೇ. 2.18 ರಷ್ಟು ಮತದಾನ ಹೆಚ್ಚಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ 60,529, ಕಾಂಗ್ರೆಸ್‌ನ ಎಸ್.ಎಸ್. ಮಲ್ಲಿಕಾರ್ಜುನ್ 70,101 ಹಾಗೂ ಜೆಡಿಎಸ್‌ನ ಮಹಿಮಾ ಜೆ. ಪಟೇಲ್ 9,702 ಮತ ಪಡೆದಿದ್ದರು. ಭರ್ಜರಿ ಎನ್ನುವಂತಹ ಮೋದಿ ಅಲೆಯ ನಡುವೆಯೂ ಹರಿಹರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಗಳಿಸಿತ್ತು.
ಈ ಬಾರಿ ನಡೆದ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರ ಸಮುದಾಯದ ಮತಗಳು ಮತ್ತು ಕಾಂಗ್ರೆಸ್, ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ಲೀಡ್ ಒದಗಿಸಲಿವೆ ಎಂಬ ಮಾತು ಬಲು ಜೋರಾಗಿ ಕೇಳಿ ಬರುತ್ತಿವೆ.
Advertisement
1977 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ ಮೊಟ್ಟ ಮೊದಲ ಸಂಸದ ಕೊಂಡಜ್ಜಿ ಬಸಪ್ಪನವರು ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಂಡಜ್ಜಿಯವರು. ಕೇಂದ್ರದ ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದವರು. ಬಿ. ಬಸವಲಿಂಗಪ್ಪ, ಡಾ| ವೈ. ನಾಗಪ್ಪ ಅವರಂತಹ ಸಚಿವರು ಇದೇ ತಾಲೂಕಿನವರು.
Related Articles
Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಲೆ ಹಾಗೂ ಯುವ ಮತದಾರರ ಒತ್ತಾಸೆ, ಸಂಸದ ಜಿ.ಎಂ. ಸಿದ್ದೇಶ್ವರ್ ತಾಲೂಕಿನಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳು ಲೀಡ್ ತಂದು ಕೊಡಲಿವೆ ಎಂಬುದು ಬಿಜೆಪಿ ಲೆಕ್ಕಾಚಾರ. ಹರಟೆ ಕಟ್ಟೆಗಳ ಮೇಲೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆಯಾದರೂ ಎಲ್ಲೂ ಸಹ ಅಭ್ಯರ್ಥಿಗಳ ಪರ ಬೆಟ್ಟಿಂಗ್ ನಡೆಯುತ್ತಿಲ್ಲ.
•ರಾ. ರವಿಬಾಬು