Advertisement

Lead Bank ಸಿಡಿ ರೇಷಿಯೋ: ಕೊನೆಯ ಸ್ಥಾನದಲ್ಲಿ ಉಡುಪಿ

11:20 PM Jun 25, 2024 | Team Udayavani |

ಮಣಿಪಾಲ: ಜಿಲ್ಲೆಯ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನೆ ಸಭೆಗೆ ಪ್ರಮುಖ ಬ್ಯಾಂಕ್‌ಗಳ ಪ್ರತಿನಿಧಿಗಳು ಗೈರುಹಾಜರಾಗಿರುವುದಕ್ಕೆ ಜಿಲ್ಲಾ ಪಂಚಾಯತ್‌ ಸಿಇಒ ಪ್ರತೀಕ್‌ ಬಾಯಲ್‌ ತೀವ್ರ ಅಸಮಾಧಾನ ಹೊರಹಾಕಿ, ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಬ್ಯಾಂಕಿಂಗ್‌ ವ್ಯವಹಾರಗಳ ಜಂಟಿ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ. ಕಚೇರಿಯ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನೆ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳ ಪ್ರತಿನಿಧಿಗಳೇ ಇರಲಿಲ್ಲ. ಇದಕ್ಕೆ ಸಿಟ್ಟಾದ ಸಿಇಒ ಅವರು, ಈ ಸಭೆ ಯಾಕಾಗಿ ಮಾಡಬೇಕು? ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸುವ ಬ್ಯಾಂಕ್‌ ಪ್ರತಿನಿಧಿಗಳೇ ನಿರ್ಲಕ್ಷ್ಯ ತೋರಿದರೆ ಹೇಗೆ? ಈ ರೀತಿಯಲ್ಲಿ ಸಭೆ ನಡೆಸುವ ಆವಶ್ಯಕೆಯಿಲ್ಲ. ವಾರದೊಳಗೆ ಪುನಃ ಸಭೆ ಆಯೋಜಿಸುವಂತೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಇಲಾಖೆಯ ಅಧಿಕಾರಿಗಳಿಗೆ ಸೂಚನೆ
ವಿವಿಧ ಇಲಾಖೆಯ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಎಲ್ಲ ಯೋಜನೆಗಳ ಮಾಹಿತಿಯನ್ನು ಜನರಿಗೆ ನೀಡಬೇಕು ಮತ್ತು ಅದಕ್ಕೆ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯ ಸಿಗುತ್ತಿರುವ ಬಗ್ಗೆಯೂ ವಿವರ ನೀಡಬೇಕು. ಉಡುಪಿ ಯಂತಹ ಜಿಲ್ಲೆಯಲ್ಲಿ ಇಷ್ಟೊಂದು ವ್ಯವಸ್ಥೆ ಇದ್ದರೂ ಯೋಜನೆಗಳ ಅನು ಷ್ಠಾನ ಸಮರ್ಪಕವಾಗಿ ಆಗದೇ ಇರುವುದು ಸರಿಯಲ್ಲ. ಜನ ಸಾಮಾನ್ಯರು ವಾಣಿಜ್ಯೋದ್ಯಮಗಳಲ್ಲಿ ಬೆಳೆಯುವಂತೆ ಮಾಡಬೇಕು. ಮುಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕು ಎಂದರು.

ಯಾವುದೇ ಯೋಜನೆಯ ಅರ್ಜಿ ಅಥವಾ ಪ್ರಸ್ತಾವನೆ ಇಲಾಖೆಯಿಂದ ಬ್ಯಾಂಕ್‌ಗೆ ಹೋದ ಸಂದರ್ಭದಲ್ಲಿ ಅದು ತಿರಸ್ಕೃತಗೊಂಡಲ್ಲಿ ಯಾಕೆ ಎಂಬುದನ್ನು ತಿಳಿಸಬೇಕು ಎಂದರು. ಆರ್‌ಬಿಐ ಪ್ರತಿನಿಧಿ ಇಳಾ ಶಾಹು ಮಾತನಾಡಿ, ಸಭೆಗೆ ಬಾರದ ಎಲ್ಲ ಬ್ಯಾಂಕ್‌ಗಳ ಪ್ರತಿನಿಧಿಗಳಿಗೂ ನೋಟಿಸ್‌ ನೀಡಲಾಗುವುದು ಎಂದರು. ನಬಾರ್ಡ್‌ ಡಿಡಿಎಂ ರಮೇಶ್‌ ಅವರು ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಕೇಂದ್ರ ಕಚೇರಿಯ ಡಿಜಿಎಂ ನಿತ್ಯಾನಂದ ಸೇರಿಗಾರ್‌ ಉಪಸ್ಥಿತರಿದ್ದರು.

ಗುರಿ ಮುಟ್ಟದ ಸಾಲ ವಿತರಣೆ ಯೋಜನೆ
ಕೃಷಿ ಹಾಗೂ ಕೃಷಿಯೇತರ ವಲಯದಲ್ಲಿ 2023-24ನೇ ಸಾಲಿನಲ್ಲಿ 13,877.95 ಕೋ.ರೂ. ಸಾಲಸೌಲಭ್ಯ ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ 11,046.76 ಕೋ.ರೂ. ಸಾಲ ವಿತರಿಸಿ, ಶೇ.79.60ರಷ್ಟು ಗುರಿ ಸಾಧನೆ ಮಾಡಲಾಗಿದೆ. ಕೃಷಿಕರಿಗೆ ಸಾಲ ನೀಡಿಕೆಯಲ್ಲಿ ಶೇ.102.43ರಷ್ಟು ಸಾಧನೆಯಾಗಿದ್ದರೆ, ಕೃಷಿ ಮೂಲಸೌಕರ್ಯ ಸುಧಾರಣೆಯ ಸಾಲ ನೀಡಿಕೆ ಕೇವಲ ಶೇ.6.95ರಷ್ಟಿದೆ. ಕೃಷಿ ಪೂರಕ ಚಟುವಟಿಕೆಗಾಗಿ ಶೇ.33.96ರಷ್ಟು ಸಾಲ ನೀಡಲಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗೆ ಶೇ.79.38ರಷ್ಟು, ಶಿಕ್ಷಣಕ್ಕೆ ಶೇ.57.6ರಷ್ಟು, ಮನೆ ನಿರ್ಮಾಣಕ್ಕೆ ಶೇ.33ರಷ್ಟು, ಸಾಮಾಜಿಕ ಮೂಲಸೌಕರ್ಯಕ್ಕೆ ಶೇ.0.14ರಷ್ಟು ಸೇರಿ ಒಟ್ಟಾರೆಯಾಗಿ ಆದ್ಯತ ವಲಯಕ್ಕೆ ಶೇ.65.65ರಷ್ಟು ಸಾಲ ನೀಡಲಾಗಿದೆ. ದುರ್ಬಲ ವರ್ಗಕ್ಕೆ ಶೇ/72.55ರಷ್ಟು ಹಾಗೂ ಆದ್ಯತೇತರ ವಲಯಕ್ಕೆ ಶೇ.125.55ರಷ್ಟು ಸಾಲ ನೀಡಲಾಗಿದೆ.

Advertisement

ಬ್ಯಾಂಕಿಂಗ್‌ ವ್ಯವಹಾರ ವೃದ್ಧಿ
ಜಿಲ್ಲೆಯ ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ವೃದ್ಧಿಯಾಗಿದೆ. ಸಿಡಿ ರೇಷಿಯೋ(ಸಾಲ ಮತ್ತು ಠೇವಣಿ ಅನುಪಾತ) ಕುಸಿತವಾಗಿದೆ. ಸಿಡಿ ರೇಷಿಯೋದಲ್ಲಿ ಉಡುಪಿಯು ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಶೇ. 46.06ರಷ್ಟಿದ್ದ ಸಿ.ಡಿ.ರೇಷಿಯೋ ಈ ಬಾರಿ 46.94ರಷ್ಟಾಗಿದೆ. ಶೇ.0.88ರಷ್ಟು ಏರಿಕೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‌ಗಳು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಬ್ಯಾಂಕಿಂಗ್‌ ವ್ಯವಹಾರದಲ್ಲಿ ಶೇ.11ರಷ್ಟು ವೃದ್ಧಿಯಾಗಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಅದು 57,467 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟು 5,973 ಕೋಟಿ ರೂ. ಬ್ಯಾಂಕಿಂಗ್‌ ವ್ಯವಹಾರದಲ್ಲಿ ಏರಿಕೆ ಕಂಡಿದೆ. ಬ್ಯಾಂಕ್‌ ಸಾಲ ನೀಡುವ ಪ್ರಮಾಣದಲ್ಲೂ ಏರಿಕೆಯಾಗಿದೆ. ಕಳೆದ ವರ್ಷ 16,241 ಕೋಟಿ ರೂ. ಸಾಲ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next