ತಿರುವನಂತಪುರಂ:ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ 2018ರ ಸೆಪ್ಟಂಬರ್ 28ರಂದು ತೀರ್ಪು ನೀಡಿದ್ದು, ಈ ಬಗ್ಗೆ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತಪೀಠಕ್ಕೆ ವರ್ಗಾಯಿಸಿದೆ. ಆದರೆ ಇದೀಗ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬೇಕೆಂಬ ವಿಚಾರದಲ್ಲಿ ಕೇರಳದ ಎಲ್ ಡಿಎಫ್ ಸರ್ಕಾರ ಹಾಗೂ ಸಿಪಿಎಂ ಯೂ ಟರ್ನ್ ಹೊಡೆದಿದೆ ಎಂದು ವರದಿ ತಿಳಿಸಿದೆ.
ಶಬರಿಮಲೆ ಕುರಿತು ಸುಪ್ರೀಂಕೋರ್ಟ್ ನ ಪಂಚಸದಸ್ಯ ಸಾಂವಿಧಾನಿಕ ಪೀಠ ಗುರುವಾರ ನೀಡಿರುವ ತೀರ್ಪಿನ ಕುರಿತು ಸಿಪಿಎಂನ ಪಾಲಿಟ್ ಬ್ಯುರೋ ಉನ್ನತ ಸಭೆಯಲ್ಲಿ, ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶದ ವಿಚಾರದ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸದಿರಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಸಲಹೆ ನೀಡಿದೆ ಎಂದು ವರದಿ ವಿವರಿಸಿದೆ.
ಕಳೆದ ವರ್ಷದಂತೆ ಶಬರಿಮಲೆಗೆ ಯುವತಿ(ಮಹಿಳೆ) ಪ್ರವೇಶಿಸಲು ಯತ್ನಿಸಿದಾಗ ಅವರಿಗೆ ಕೇರಳ ಸರ್ಕಾರ ಭದ್ರತೆ ನೀಡಿತ್ತು. ಆದರೆ ಈ ಬಾರಿ ಭದ್ರತೆ ನೀಡಿ ಪರಿಸ್ಥಿತಿಯನ್ನು ಉದ್ನಿಗ್ನಗೊಳಿಸದಿರುವಂತೆ ಸಿಪಿಎಂ ಸೂಚನೆ ನೀಡಿದೆ.
ಶನಿವಾರ ಶಬರಿಮಲೆ ದೇಗುಲ ತೆರೆದಿದ್ದು, ಭಾನುವಾರದಿಂದ ಎರಡು ತಿಂಗಳ ಕಾಲ ಶಬರಿಮಲೆಗೆ ಅಯ್ಯಪ್ಪ ಭಕ್ತರ ದಂಡು ಹರಿದು ಬರಲಿದೆ. ಯಾರೇ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಭದ್ರತೆಯನ್ನು ಅಪೇಕ್ಷಿಸಿದರೆ, ಅವರು ಮೊದಲು ಕೋರ್ಟ್ ಆದೇಶವನ್ನು ನೀಡಬೇಕಾಗುತ್ತದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ.
ಈ ಬಾರಿ ಶಬರಿಮಲೆ ದೇಗುಲದ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ. ತೃಪ್ತಿ ದೇಸಾಯಿಯಂತಹವರು ಯಾವುದೇ ಕಾರಣಕ್ಕೂ ಅವಕಾಶವನ್ನು ಉಪಯೋಗಿಸಿಕೊಂಡು ಶಕ್ತಿ ಪ್ರದರ್ಶನ ನಡೆಸಲು ಈ ಬಾರಿ ಅವಕಾಶ ನೀಡುವುದಿಲ್ಲ. ಶಬರಿಮಲೆ ಇಂತಹ ನಾಟಕದ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.