ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣ ಎಲ್‌ಡಿಎಫ್ ಸರಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ. ಅದನ್ನು ಸರಿಯಾದ ರೀತಿಯಲ್ಲಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ನಿಭಾಯಿಸಲಿಲ್ಲ ಎಂದು ಕೇರಳ ಸಿಪಿಎಂ ಆಕ್ಷೇಪ ಮಾಡಿದೆ. ಇದರಿಂದಾಗಿ ಪ್ರತಿಪಕ್ಷಗಳ ಟೀಕೆಯ ನಡುವೆ ಪಕ್ಷದ ನಾಯಕರಿಂದಲೇ ಟೀಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎದುರಿಸುವಂತಾಗಿದೆ.
ಸಿಎಂ ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ, ಅಜಾಗರೂಕತೆ ಇಲ್ಲಿ ಎದ್ದು ಕಾಣುತ್ತಿದೆ. ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ವ್ಯವಹಾರಗಳ ಬಗ್ಗೆ ಸರಕಾರ ಸರಿಯಾದ ಮೇಲ್ವಿಚಾರಣೆ ನಡೆಸಲಿಲ್ಲ. ಕೋವಿಡ್ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿರ್ವಹಿಸಿ, ಗಳಿಸಿಕೊಂಡಿದ್ದ ಸರಕಾರದ ಮರ್ಯಾದೆ ಈ ಪ್ರಕರಣದಿಂದಾಗಿ ಹಾಳಾಯಿತು. ಪ್ರತಿಪಕ್ಷಗಳ ಟೀಕೆಗೆ ಗ್ರಾಸವಾಯಿತು ಎಂದು ಹರಿಹಾಯ್ದಿದೆ. ಇನ್ನು ಮುಂದೆ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಸರಕಾರಕ್ಕೆ ತಾಕೀತು ಮಾಡಿದೆ.
ಅರೆ ಪ್ರಜ್ಞಾಹಿನ ಸ್ಥಿತಿಯಲ್ಲಿ ಅಧಿಕಾರಿ: ಈ ಮಧ್ಯೆ, ಯುಎಇ ರಾಯಭಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇರಳ ಪೊಲೀಸ್ ಅಧಿಕಾರಿ, ಜೈಘೋಷ್ ಎಂಬವರು ತಮ್ಮ ಮನೆಯ ಸಮೀಪ ಅರೆಪ್ರಜ್ಞಾ ಹೀನ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಗುರುವಾರ ರಾತ್ರಿಯಿಂದ ಅವರು ನಾಪತ್ತೆಯಾಗಿದ್ದರು. ಮನೆಯಿಂದ 150 ಮೀಟರ್ ದೂರದಲ್ಲಿರುವ ದಟ್ಟವಾದ ಪೊದೆಯ ಮಧ್ಯೆ ಅವರು ಪತ್ತೆಯಾಗಿದ್ದು, ಕೈಗೆ ಗಾಯವಾಗಿದೆ. ಬಹುಶ: ಮಣಿಕಟ್ಟನ್ನು ಕೊಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಕಳ್ಳಸಾಗಣೆಯಾಗಿರುವ ಚಿನ್ನ ಕಲ್ಲಿಕೋಟೆಯ ಚಿನ್ನಾಭರಣ ಮಳಿಗೆಗಳಿಗೆ ಹಂಚಿಕೆಯಾಗಿರುವ ಸಾಧ್ಯತೆ ಎಂದು ಕಸ್ಟಮ್ಸ್ ಇಲಾಖೆ ಪತ್ತೆ ಹಚ್ಚಿದೆ. ಈ ಬಗ್ಗೆ ಇಲಾಖೆ ಮಲಪ್ಪುರಂ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ. ಎನ್‌ಐಎ ವಶದಲ್ಲಿರುವ ಚಿನ್ನ ಕಳ್ಳಸಾಗಣೆಯ ರೂವಾರಿ ಸ್ವಪ್ನಾ ಸುರೇಶ್‌ಳನ್ನು ನೇಮಕ ಮಾಡುವುದರಲ್ಲಿ ಅಮಾನತಾಗಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಪ್ರಧಾನ ಪಾತ್ರವಹಿಸಿದ್ದರು ಎಂದು ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿ ಹೇಳಿದೆ.