Advertisement

ಖಾತಾ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳಿಗೆ ಮನವಿ

02:25 AM Jul 17, 2017 | Karthik A |

ಪುತ್ತೂರು: ಸರಕಾರದ ಆದೇಶದಿಂದ ನಗರಸಭೆಯಲ್ಲಿ ಉಂಟಾಗಿರುವ ಖಾತಾ ಸಮಸ್ಯೆ ನಿವಾರಣೆಗೆ ನಗರಸಭೆಯ ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಲಾಯಿತು. ರಾಜ್ಯದ ನಗರಸಭೆ ಪುರಸಭೆಗಳಲ್ಲಿ ಖಾಸಗಿ ಆಸ್ತಿಗಳಿಗೆ ಖಾತೆಯನ್ನು ನೀಡುವ ಸಂದರ್ಭದಲ್ಲಿ ಕೆಲವು ನಿಯಮವನ್ನು ಅಳವಡಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯಾದರ್ಶಿ ಮಾ. 22ರಂದು ಆದೇಶವನ್ನು ಹೊರಡಿಸಿದ್ದು, ಈ ಆದೇಶವು ರಾಜ್ಯದ ಎಲ್ಲಾ ಪುರಸಭೆ/ನಗರಸಭೆಗೆ ಹೋಗಿರುತ್ತದೆ.

Advertisement

ಆದೇಶದಂತೆ ನಿವೇಶನಗಳಿಗೆ ಖಾತೆಗಳನ್ನು ನೀಡಲು ಸಮಸ್ಯೆಯಾಗಿರುತ್ತದೆ. ಈ ಆದೇಶವನ್ನು ಮಾರ್ಪಾಡಿಸಿ ಜನರಿಗೆ ಆಗುವ ಸಮಸ್ಯೆಯನ್ನು ನಿವಾರಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಬ್ಲಾಕ್‌ ಕಾಂಗ್ರೆಸ್‌ ನಿಕಟಪೂರ್ವ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ, ನಗರಸಭಾ ಸದಸ್ಯರಾದ ಎಚ್‌. ಮಹಮ್ಮದ್‌ ಆಲಿ, ಶಕ್ತಿಸಿನ್ಹ, ಮುಖೇಶ್‌ ಕೆಮ್ಮಿಂಜೆ, ಅನ್ವರ್‌ ಖಾಸಿಂ ಅವರ ನಿಯೋಗವು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸರಕಾರದ ಆದೇಶದಲ್ಲಿ ಖಾಲಿ ನಿವೇಶನಗಳ ಬಗ್ಗೆ ಮಾತ್ರ ಉಲ್ಲೇಖವಿದ್ದು ಈಗಾಗಲೇ ಮನೆ ಹಾಗೂ ಕಟ್ಟಡ ಇರುವ ಸ್ಥಳಗಳಿಗೆ ಏಕ ವಿನ್ಯಾಸ ಅನುಮೋದನೆ ಪಡೆದುಕೊಂಡು ಖಾತೆ ನೀಡಬೇಕೆಂದು ಸೂಚಿಸಿರುವುದಿಲ್ಲ. ಆದರೆ ಸರಕಾರದ ಈ ಸುತ್ತೋಲೆಯ ಅಂಶವನ್ನು ತಿರುಚಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಇನ್ನೊಂದು ಆದೇಶ ಹೊರಡಿಸಿ ಪುತ್ತೂರು ನಗರಸಭೆಯಲ್ಲಿ ಯಾವುದೇ ಖಾತೆ ನೀಡುವಿಕೆ ಹಾಗೂ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಕರ್ತವ್ಯ ಲೋಪ ಎಸಗಿದ್ದಾರೆ.

ಇದರಿಂದಾಗಿ ಬ್ಯಾಂಕ್‌ ಸಾಲ ಪಡೆಯಲು ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ಜನರಿಗೆ ಖಾತೆ ಸಿಗದೆ ಸಮಸ್ಯೆಯಾಗಿದೆ. ಕೇವಲ ಪುತ್ತೂರು ನಗರಸಭೆಯಲ್ಲಿ ಮಾತ್ರ ಖಾತೆ ನೀಡುವುದನ್ನು ಸ್ಥಗಿತ ಗೊಳಿಸಿರುವುದರಿಂದ ನಗರಸಭೆಗೆ ಕೆಟ್ಟ ಹೆಸರು ಬಂದಿರುತ್ತದೆ. ತಾವು ಈ ಕುರಿತು ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿ ಜನರಿಗೆ ತೊಂದರೆ ನೀಡಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ವಿನಂತಿಸಲಾಯಿತು. ಮನವಿ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್‌ ದ.ಕ. ಜಿಲ್ಲೆಯ ಮಾಜಿ ಪ್ರಭಾರ ಅಧ್ಯಕ್ಷ  ಇಬ್ರಾಹಿಂ ಕೋಡಿಜಾಲ್‌, ಸರಕಾರಿ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next