ರಾಮನಗರ: ಮಳೆ ನೀರು ಹರಿದು ಹೋಗುವ ದೊಡ್ಡ ಹಳ್ಳವನ್ನು ಅಕ್ರಮವಾಗಿ ಮುಚ್ಚಿ ಲೇಔಟ್ ನಿರ್ಮಿಸಲಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಪಾಲಾ ಬೋವಿ ದೊಡ್ಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ರೈತರ ಬೆಳೆಗೆ ನೀರು ಸಿಗುತ್ತಿತ್ತು. ಕೆಲವರು ಸರ್ಕಾರಿ ಭೂಮಿಯಲ್ಲಿರುವ ಹಳ್ಳಮುಚ್ಚಿ ಲೇಔಟ್ ನಿರ್ಮಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ ಎಂದು ಬೇಸರಿಸಿದ್ದಾರೆ.
ತಾಲೂಕಿನ ಬಿಳಗುಂಬ ಬಳಿಯ ಜಲಸಿದ್ಧೇಶ್ವರ ಬೆಟ್ಟದಿಂದ ಆರಂಭವಾಗುವ ದೊಡ್ಡ ಹಳ್ಳ, ಹಳ್ಳಿಮಾಳ ಗ್ರಾಮದ (ಸರ್ವೆ ನಂ.66-ಹೊಸ ಸಂ.256/2, 256/3) ಮೂಲಕ ಹರಿದು ಅರ್ಕಾವತಿ ನದಿ ಸೇರುತ್ತದೆ. ಪಾಲಾ ಬೋವಿ ದೊಡ್ಡಿಯಲ್ಲಿ ಹಳ್ಳಕ್ಕೆ ಮೂರ್‍ನಾಲ್ಕು ಚೆಕ್ ಡ್ಯಾಂ ನಿರ್ಮಿಸಿಕೊಳ್ಳಲಾಗಿದೆ. ಡ್ಯಾಂನಲ್ಲಿ ಶೇಖರಣೆಯಾದ ನೀರು ಬಳಸಿ ಮುಂಗಾರು ಬೆಳೆಯಾಧಾರಿತ ಬೆಳೆ ಬೆಳೆಯುತ್ತಿ ದ್ದೇವೆ. ದನ-ಕರು,ಪ್ರಾಣಿ-ಪಕ್ಷಿಗೆ ಕುಡಿಯಲು ನೀರು ಸಿಗುತ್ತಿತ್ತು ಎಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ವೆಂಕಟಗಿರಿಯಯ್ಯ ಮತ್ತು ಭಾಗ್ಯಮ್ಮ (ಸರ್ವೆ ನಂ.256/2, 256/3) ಗೋಮಾಳ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿದ್ದಾರೆ. ಈ ಭೂಮಿಯ ಖರಾಬಿನಲ್ಲಿ ಸರ್ಕಾರಿ ಹಳ್ಳವಿದೆ. ಹಳ್ಳವನ್ನು ಮುಚ್ಚಿ ಲೇಔಟ್ ಮಾಡಿದ್ದಾರೆ. ಪರಿಣಾಮ ಮುಂಗಾರು ಮಳೆ ನೀರು ಸಂಗ್ರಹಣೆಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಅಧಿಕಾರಿಗಳ ಶಾಮೀಲು ಆರೋಪ: ಹಳ್ಳ ಮುಚ್ಚಿ ಲೇಔಟ್ ನಿರ್ಮಿಸುತ್ತಿರುವ ಅಕ್ರಮದಲ್ಲಿ ಕಂದಾಯ ಅಧಿಕಾರಿಗಳು ಭಾಗಿಯಾಗಿ ದ್ದಾರೆ. ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಲೇಔಟ್ ನಿರ್ಮಿಸುತ್ತಿರುವ ಮಾಲೀಕನನ್ನು ಪ್ರಶ್ನಿಸಿದಾಗ ತಮಗೆ ರಾಜಕೀಯ ಬೆಂಬಲವಿದೆ. ಪ್ರಶ್ನೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಪಂದಿಸದ ಅಧಿಕಾರಿಗಳು: ಗ್ರಾಮಸ್ಥರು ತಮಗಾದ ಸಮಸ್ಯೆ ಬಗ್ಗೆ ಈಗಾಗಲೇ ಹರೀಸಂದ್ರ ಗ್ರಾಪಂ,ತಹಶೀಲ್ದಾರ್, ಉಪವಿಭಾ ಗಾಧಿಕಾರಿ, ಜಿಲ್ಲಾಧಿಕಾರಿ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ಸಂಬಂಧಿಸಿದ ಇಲಾಖೆಗೆ ತಿಂಗಳ ಹಿಂದೆಯೇ ದೂರು ನೀಡಲಾಗಿದೆ. ಈವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರಿಸಿದ್ದಾರೆ.
ಇದನ್ನೂ ಓದಿ :ಅಧಿಕಾರಿಗಳಿಂದ ಕಲ್ಲು ಕ್ವಾರಿ ಪರಿಶೀಲನೆ
ಜಿಲ್ಲಾಡಳಿತ ತಮ್ಮ ಮನವಿ ಪುರಸ್ಕರಿಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರಾದ ಶಿವರಮಯ್ಯ, ಲಿಂಗರಾಜು, ಗೌರಮ್ಮ, ಲಿಂಗರಾಜು, ಭವಾನಿ, ನಾಗ, ಚಿಕ್ಕಳಮ್ಮ,ಚಲುವಮ್ಮ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.