Advertisement
ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಅಭಿವೃದ್ಧಿ ಕಾರ್ಯಗಳತ್ತ ಶಾಸಕರ ಚಿತ್ತ ನೆಟ್ಟಿದ್ದು, ಕಾನೂನು ಬದ್ಧವಾಗಿ ಪ್ರಾರಂಭಿಸಲಾಗುತ್ತಿದೆ. ವರ್ಷದ ಹಿಂದೆಯೇ ಮೂರು ಕಾಮಗಾರಿಗಳಿಗೆ ಪ್ಯಾಕೇಜ್ ಮಾಡಿ, ಅನುಮೋದನೆಗೆ ಪ್ರಯತ್ನಿಸಲಾಗಿತ್ತು. ಇದನ್ನು ಸ್ಥಳೀಯ ಗುತ್ತಿಗೆದಾರರು ಪ್ರಶ್ನಿಸಿ, ಕಾಮಗಾರಿಗಳ ಪ್ರಾರಂಭಕ್ಕೆ ಅಡ್ಡಿ ಮಾಡಿದ್ದರು. ಈಗ ಪಿಡಬ್ಲುಡಿ ಇಲಾಖೆಗೆ ನೂತನ ಕಚೇರಿ, ನೂತನ ಐಬಿ ಹಾಗೂ ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಿಗೆ ಆರಂಭಿಸುವ ಮೂಲಕ ಶಾಸಕರು ಜಾಣ ನಡೆ ಇಟ್ಟಿದ್ದಾರೆ.
Related Articles
Advertisement
ಅಥ್ಲೆಟ್‌ಗಳಿಗೆ ಅಗತ್ಯ ಟ್ರ್ಯಾಕ್, ಗ್ಯಾಲರಿ, ಒಳಾಂಗಣ ಕ್ರೀಡಾಂಗಣ, ವಿಶ್ರಾಂತಿ ಕೊಠಡಿ, ಶೌಚಾಲಯ, ಮೈದಾನಕ್ಕೆ ಆವರಣ ಗೋಡೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಮಾಲಾದೇವಿ ಕ್ರೀಡಾಂಗಣದಲ್ಲಿ ಬರಲಿವೆ. ಈಗ ಇದ್ದ ಕ್ರೀಡಾಂಗಣದಲ್ಲಿ ಅಗತ್ಯ ಸೌಲಭ್ಯವೂ ಇಲ್ಲದೆ ಅಥ್ಲೆಟ್ಸ ಕ್ರೀಡಾಪಟುಗಳು ಅವಕಾಶದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ಶಾಸಕಿ ರೂಪಾಲಿ ನಾಯ್ಕ ಯೋಜನೆ ರೂಪಿಸಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕೋಪಯೋಗಿ ಇಲಾಖೆ ಸರ್ಕ್ಯೂಟ್ ಹೌಸ್ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಬಲಿಯಾಗಿತ್ತು. ಈಗ ನೂತನ ಕಟ್ಟಡ ಸಮುದ್ರ ತೀರದ ಎದುರಿಗಿದ್ದು, ಸೂಕ್ತ ಪರಿಸರದಲ್ಲಿ ನೂತನ ಕಟ್ಟಡ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಆಕರ್ಷಕ ರೀತಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಯೋಜನೆ ಸಹ ಸಿದ್ಧವಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಆಗುವಂತೆ ನೋಡಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಚೇರಿಯ ಕಟ್ಟಡವೂ ಸಮರ್ಪಕವಾಗಿಲ್ಲದೆ, ಉದ್ಯೋಗಿಗಳಿಗೆ ಕೆಲಸ ಮಾಡಲೂ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಶಾಸಕರು ಕಚೇರಿಯಲ್ಲಿ ಉತ್ತಮ ಸೌಲಭ್ಯ ಕಲ್ಪಿಸಿ, ಉದ್ಯೋಗಿಗಳಿಗೆ ನಿರಾತಂಕವಾಗಿ ಕೆಲಸ ಮಾಡುವಂತೆ ಆಗಲು ನೂತನ ಕಟ್ಟಡ ನಿರ್ಮಾಣಕ್ಕೆ 9.80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ವಿವಿಧ ಕಡೆ ರಸ್ತೆ ಹಾಗೂ ಸಣ್ಣ ಸೇತುವೆಗಳ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಜನರ ಬೇಡಿಕೆಗಳ ಪುಟ್ಟ ಪುಟ್ಟ ಕಾಮಗಾರಿಗಳು ನಡೆಯುತ್ತಿದ್ದು, ಜನರ ಕಣ್ಣೆದರು ಅಭಿವೃದ್ಧಿ ಕಾಮಗಾರಿ ಕಾಣುವಂತೆ ನೋಡಿಕೊಳ್ಳಲಾಗಿದೆ.
ಜಿಲ್ಲಾ ಕೇಂದ್ರದ ಕ್ರೀಡಾಪಟುಗಳು ಅವಕಾಶದಿಂದ ವಂಚಿತರಾಗದಂತೆ ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕಾಗಿ ಮಾಲಾದೇವಿ ಕ್ರೀಡಾಂಗಣವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತದೆ.ಅನುದಾನ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲ, ಸಚಿವ ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಾಯ ನೆನಪಿಸಿಕೊಳ್ಳುತ್ತೇನೆ. -ರೂಪಾಲಿ ನಾಯ್ಕ, ಶಾಸಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ.