ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರ. ಇದನ್ನು ಹುಬ್ಬಳ್ಳಿ-ಧಾರವಾಡ ಎರಡೂ ನಗರದ ಮತದಾರರನ್ನು ಸೇರಿಸಿ ಹೆಣೆಯಲಾಗಿದೆ. ಲಕ್ಷ್ಮೀ ಕಾಂಚಾಣದ ವಾಣಿಜ್ಯ ನಗರಿ ಹುಬ್ಬಳ್ಳಿ, ವಿದ್ಯಾ ಸರಸ್ವತಿ ಎಂದೇ ಹೆಸರಾದ ಧಾರವಾಡ ಎರಡೂ ನಗರಗಳ ಸಮ್ಮಿಲನಗೊಂಡು ಈ ಕ್ಷೇತ್ರ ರಚನೆಯಾಗಿದೆ.
ಹು-ಧಾ ಪಶ್ಚಿಮ ಕ್ಷೇತ್ರ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಇಲ್ಲಿ 3,38,976 ಜನ ಮತದಾರರಿದ್ದು, ಈ ಬಾರಿ ಇಲ್ಲಿ ಒಟ್ಟು ಶೇ.63.86 ಮತದಾನವಾಗಿ 1,55,310 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಭವಿಷ್ಯಃ ಅದೇ ಕಾಂಗ್ರೆಸ್ ಸೋಲಿಗೆ ಇಲ್ಲಿ ಪ್ರಬಲ ಕಾರಣವಾಗಿ ಮುಸ್ಲಿಂ ಮತಗಳು ಕ್ರೂಢೀಕರಣವಾಗುತ್ತಿದ್ದಂತೆಯೇ ಬಿಜೆಪಿ ಹಣೆಗೆ ಕೇಸರಿ ಬಣ್ಣದ ತಿಲಕ ಇಡುವ ಅಭಿಯಾನ ಆರಂಭಿಸಿ ಕ್ಷೇತ್ರದಲ್ಲಿನ ಹಿಂದೂ ಮತ್ತು ಲಿಂಗಾಯತ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗೆದ್ದಿತು.
Advertisement
ಕಳೆದ ವಿಧಾನಸಭೆ ಚುನಾವಣೆ ಲೆಕ್ಕ ನೋಡಿದರೆ ಈ ಕ್ಷೇತ್ರ ಬಿಜೆಪಿಗೆ ಅತೀ ಹೆಚ್ಚು ಅನುಕೂಲವಾಗಿರುವ ಕ್ಷೇತ್ರ. 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಕಣದಿಂದಲೇ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಕೈ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರಗೆ ಬೆಂಬಲ ಸೂಚಿಸಿದರು.
Related Articles
Advertisement
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಬರೊಬ್ಬರಿ 20,843 ಮತಗಳ ಅಂತರ ಕಾಯ್ದುಕೊಂಡಿತ್ತು. ಆದರೆ ಈ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಕೃಷಿಕರಿದ್ದು, ಈ ಪೈಕಿ ಹೆಚ್ಚಿನ ಜನರು ಈ ಬಾರಿ ವಿನಯ್ ಬೆಂಬಲಕ್ಕೆ ನಿಂತಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಈ ಕ್ಷೇತ್ರದಲ್ಲಿನ ಮಧ್ಯಮ ವರ್ಗದ ಲಿಂಗಾಯತರು ಮತ್ತು ಬಿಜೆಪಿ ಬೆಂಬಲಿಗರು ಬರೊಬ್ಬರಿ 1.5 ಲಕ್ಷದಷ್ಟಿದ್ದು, ಈ ಪೈಕಿ ಹೆಚ್ಚಿನವರು ಬಿಜೆಪಿಯತ್ತ ಒಲವು ತೋರಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕಳೆದ ಬಾರಿಯಷ್ಟು ಅಲ್ಲದೇ ಹೋದರೂ ಬಿಜೆಪಿ ಈ ಕ್ಷೇತ್ರದಲ್ಲಿ ಕೊಂಚ ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಕಳೆದ ಬಾರಿಗಿಂತ ಈ ಬಾರಿ ಲಿಂಗಾಯತ ವಿಚಾರ ಈ ಕ್ಷೇತ್ರದಲ್ಲೂ ತಕ್ಕಮಟ್ಟಿಗೆ ಕೆಲಸ ಮಾಡಿದೆ.
ಮತಗುಚ್ಛಗಳು ಎತ್ತ ?: ಇನ್ನು ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಕೊಳಗೇರಿ ಪ್ರದೇಶಗಳು ಇರುವುದು ಇದೇ ಕ್ಷೇತ್ರದಲ್ಲಿ. ಇಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ವಾಸವಾಗಿದ್ದು, ಕೊಳಗೇರಿಗಳಲ್ಲಿ ಮತದಾನ ಪ್ರಮಾಣ ಶೇ.80ಕ್ಕಿಂತಲೂ ಅಧಿಕವಾಗಿದೆ. ಲಕ್ಷ್ಮೀ ಸಿಂಗನಕೇರಿ, ಗೊಲ್ಲರ ಓಣಿ, ಸುಡಗಾಡು ಸಿದ್ಧರ ಕಾಲೋನಿ, ತೇಜಸ್ವಿನಗರ ಎಲ್ಲಕ್ಕಿಂತ ಹೆಚ್ಚಾಗಿ ಹುಬ್ಬಳ್ಳಿಯಲ್ಲಿರುವ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗಿದ್ದು, ಇದು ಯಾರಿಗೆ ಸಿಹಿ, ಯಾರಿಗೆ ಕಹಿ ಎನ್ನುವ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಈ ಸ್ಲಂಗಳಲ್ಲಿ ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಜನರೇ ಹೆಚ್ಚು ವಾಸವಾಗಿದ್ದಾರೆ. ಈ ಬಾರಿ ಇವರು ಯಾರಿಗೆ ಒಲವು ತೋರಿಸಿದ್ದಾರೆನ್ನುವುದು ಮೇ 23ಕ್ಕೆ ಗೊತ್ತಾಗಲಿದೆ. ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಧಾರವಾಡ ಬಿಜೆಪಿ ಕೈ ಹಿಡಿದಿದ್ದರೆ, ಹುಬ್ಬಳ್ಳಿ ಕಾಂಗ್ರೆಸ್ ಕೈ ಹಿಡಿಯುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹು-ಧಾ ಪಶ್ಚಿಮ ಕ್ಷೇತ್ರ:
ಈ ಬಾರಿ ಖಂಡಿತಾ ಈ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಅಣ್ಣಾವರ್ರೇ ಹೆಚ್ಚು ಮತಗಳನ್ನು ಪಡೆಯುತ್ತಾರೆ. ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಬಿಜೆಪಿಗಿಂತ ಇಲ್ಲಿ ಕಾಂಗ್ರೆಸ್ ಬಲಗೊಂಡಿದ್ದು, ಗೆಲುವು ನಮ್ಮದೇ . -ಸೃಜನ್, ಕಾಂಗ್ರೆಸ್ ಕಾರ್ಯಕರ್ತ
ಈ ಬಾರಿ ಲೀಡ್ ಕಡಿತಗೊಳ್ಳುವುದೇ?:
2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 4,46,786 ಹಾಗೂ ಕಾಂಗ್ರೆಸ್ 3,09,123 ಮತಗಳನ್ನು ಪಡೆದುಕೊಂಡಿದ್ದವು. 2009ರಲ್ಲಿ ಪ್ರಹ್ಲಾದ ಜೋಶಿ ಅವರು 1,37,663 ಮತಗಳ ಅಂತರದಿಂದ ಗೆದ್ದರೆ, 2014ರ ಲೋಕಸಭೆಯಲ್ಲಿ 1,13,657 ಮತಗಳಿಂದ ಗೆದ್ದರು. ಅಂದರೆ ಗೆಲುವಿನ ಅಂತರ 24,006 ಕಡಿಮೆಯಾಗಿದೆ. 2019ರ ಚುನಾವಣೆಯಲ್ಲಿ ಲೀಡ್ ಕಡಿತಗೊಳ್ಳುವುದೇ ? ಎಂಬ ಪ್ರಶ್ನೆಗೆ ಹೌದು ಎನ್ನುತ್ತಿದೆ ಸ್ವತಃ ಬಿಜೆಪಿ ಪಾಳೆಯ. ಕಳೆದ ಬಾರಿಯಷ್ಟು ಲೀಡ್ ಬರದೇ ಹೋದರೂ ಸಾಧಾರಣ 25-30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎನ್ನುತ್ತಿದೆ ಕಮಲ ಪಡೆ.
ಲಿಂಗಾಯತ ಶಾಸಕರ ನಟ್ ಟೈಟ್ ಮಾಡಿದ ಶಾ:
ಕಾಂಗ್ರೆಸ್ ಮುಖಂಡರು ಲಿಂಗಾಯತರು ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕೆನ್ನುವ ವಿಚಾರವನ್ನು ಗುಪ್ತವಾಗಿ ಇಡದೇ ಯಾವಾಗ ಬಹಿರಂಗವಾಗಿ ಫರ್ಮಾನು ಹೊರಡಿಸಿ ದರೋ ಆಗ ಕಮಲ ಪಡೆ ಥಟ್ ಅಂತಾ ಎಚ್ಚರಗೊಂಡಿತು. ಅದರಲ್ಲೂ ಸಂಸದ ಪ್ರಹ್ಲಾದ ಜೋಶಿ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದಲೇ ನೇರವಾಗಿ ಜಿಲ್ಲೆಯ ಲಿಂಗಾಯತ ಬಿಜೆಪಿ ಶಾಸಕರಿಗೆ ಕಳೆದ ವಿಧಾನಸಭೆಯಲ್ಲಿ ತಾವು ತಮ್ಮ ಕ್ಷೇತ್ರಗಳಲ್ಲಿ ಪಡೆದುಕೊಂಡಷ್ಟೇ ಮತಗಳನ್ನು ಈ ಚುನಾವಣೆಯಲ್ಲೂ ಕೊಡಿಸಬೇಕು. ಇಲ್ಲವಾದರೆ ಮುಂದಿನ ಬಾರಿ ಟಿಕೆಟ್ ಇಲ್ಲ. ಜತೆಗೆ ಪಕ್ಷದ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಫರ್ಮಾನು ಹೊರಡಿಸಿದರು. ಇದರಿಂದ ಆರಂಭದಲ್ಲಿ ಸಡಿಲವಾಗಿದ್ದ ಲಿಂಗಾಯತ ಶಾಸಕರೆಲ್ಲರೂ ನಂತರ ತಮ್ಮ ಕ್ಷೇತ್ರಗಳಲ್ಲಿ ಓಡಾಡಿ ಬಿಜೆಪಿಗೆ ಮತ ಹಾಕಿಸಿದ್ದಾರೆ. ಇದು ಈ ಬಾರಿ ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.