Advertisement

ಲಕ್ಷ್ಮೀ ಹೋಟೆಲ್‌ನಲ್ಲಿ ಚಟ್ನಿಯೇ ಫೇಮಸ್‌

05:41 PM Sep 22, 2019 | Sriram |

ಕೆಲವು ಹೋಟೆಲ್‌ಗ‌ಳು ವಿಶೇಷ ತಿಂಡಿ, ಊಟದಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತವೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿರುವ “ಲಕ್ಷ್ಮೀ ಹೋಟೆಲ್‌’ ಚಟ್ನಿಯಿಂದ ಫೇಮಸ್ಸಾಗಿದೆ. ಇಲ್ಲಿ ಕೊಡುವ ಕಡ್ಲೆ ಹಿಟ್ಟಿನ ಚಟ್ನಿ ಗ್ರಾಹಕರ ಮನಗೆದ್ದಿದೆ.

Advertisement

ವಿಜಯಪುರ ನಗರದಿಂದ ಸಾಂಗ್ಲಿ ರೋಡ್‌ನ‌ಲ್ಲಿ 20 ಕಿ.ಮೀ. ಸಾಗಿದ್ರೆ ತಿಕೋಟಾ ಪಟ್ಟಣ ಸಿಗುತ್ತೆ. ಇದು ಇತ್ತೀಚೆಗೆ ತಾಲೂಕು ಕೇಂದ್ರವಾಗಿದ್ದರೂ ವಾಣಿಜ್ಯ ವಹಿವಾಟಿನಲ್ಲಿ ಮುಂದಿದೆ. ಹೀಗಾಗಿ ಜಿಲ್ಲೆಯ ಹೊರಗಡೆಯಿಂದಲೂ ರೈತರು, ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ಇದರಿಂದ ಇಲ್ಲಿನ ಹೋಟೆಲ್‌ಗ‌ಳಿಗೂ ಉತ್ತಮ ವ್ಯಾಪಾರವಾಗುತ್ತದೆ. ಅದರಲ್ಲಿ ಲಕ್ಷ್ಮೀ ಹೋಟೆಲ್‌ ಕೂಡ ಒಂದು.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ, 1946ರಲ್ಲಿ ಬ್ರಿಟಿಷರಿಂದ ಲೈಸೆನ್ಸ್‌ ಪಡೆದ ಕಲ್ಲಪ್ಪ ಮಾಳಿ, ತಿಕೋಟಾ ಬಸ್‌ ನಿಲ್ದಾಣದಲ್ಲಿ ಬಾಡಿಗೆಗೆ ಮಳಿಗೆ ಪಡೆದು ಚಿಕ್ಕದಾಗಿ ಹೋಟೆಲ್‌ ಪ್ರಾರಂಭಿಸಿದ್ರು. ಹಲವು ವರ್ಷಗಳ ನಂತರ ಈ ಹೋಟೆಲನ್ನು ಮಾರ್ಕೆಟ್‌ಗೆ ವರ್ಗಾವಣೆ ಮಾಡಲಾಯಿತು. ಇವರ ನಂತರ ಕಲ್ಲಪ್ಪರ ಹಿರಿಯ ಮಗ ನಾನಾಸಾಬ್‌ ಕಲ್ಲಪ್ಪ ಮಾಳಿ ಹೋಟೆಲ್‌ ಮುನ್ನಡೆಸಿದರು.

ಈಗ, ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ದೇವಾಲಯದ ಪಕ್ಕದಲ್ಲಿ ಹೋಟೆಲ್‌ ಇದೆ. ಕಲ್ಲಪ್ಪ ಮಾಳಿ ಅವರ ಕಿರಿಯ ಪುತ್ರ ಸಿದ್ದಪ್ಪ ಕಲ್ಲಪ್ಪ ಮಾಳಿ ಮುನ್ನಡೆಸುತ್ತಿದ್ದಾರೆ. ಸಾಂಗ್ಲಿಯಲ್ಲಿ ಬ್ಯಾಂಕ್‌ ಉದ್ಯೋಗಿಯಾಗಿದ್ದ ಇವರು, ನಿವೃತ್ತಿ ನಂತರ ಹೋಟೆಲ್‌ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಒಟ್ಟಾರೆ ಮೂರು ತಲೆಮಾರು ಕಂಡಿದ್ದರೂ ಈ ಹೋಟೆಲ್‌ನ ರುಚಿ, ತಿಂಡಿಗಳು ಮಾತ್ರ ಬದಲಾಗಿಲ್ಲ. ಸಿದ್ದಪ್ಪ ಮಾಳಿ ಜೊತೆ ಶ್ರೀಶೈಲ, ರಾಜು ತಳವಾರ್‌, ಜಾಧವ್‌ ಕೆಲಸ ಮಾಡುತ್ತಿದ್ದಾರೆ.

ಊಟ ಇಲ್ಲ, ತಿಂಡಿ ಮಾತ್ರ:
ಇಡ್ಲಿ, ವಡೆ, ಪೂರಿ ಬಾಜಿ, ರೈಸ್‌ಬಾತ್‌, ಅವಲಕ್ಕಿ ಚೂಡಾ, ಚೌಚೌಬಾತ್‌, ಚುರುಮುರಿ ಹೀಗೆ.. ಏಳು ಎಂಟು ತಿಂಡಿಗಳನ್ನು ಮಾತ್ರ ಮಾಡಲಾಗುತ್ತದೆ. ರೈಸ್‌ಬಾತ್‌ಗೆ 30 ರೂ. ಬಿಟ್ಟರೆ ಉಳಿದ ತಿಂಡಿಗಳ ದರ 20, 25 ರೂ., ಚಹಾ ದರ 5 ರೂ. ಇದೆ.

Advertisement

ಹೋಟೆಲ್‌ ವಿಶೇಷ:
ಕಡ್ಲೆ ಹಿಟ್ಟಿನ ಚಟ್ನಿ, ಬಟಾಣಿ ಕುರ್ಮಾ ಲಕ್ಷ್ಮೀ ಹೋಟೆಲ್‌ನ ಬ್ರಾಂಡ್‌ ಆಗಿದೆ. ಇದರಿಂದಲೇ ಈ ಹೋಟೆಲ್‌ ಹೆಸರಾಗಿದೆ. ಪೂರಿ, ಬಜ್ಜಿಯನ್ನು ಕಡ್ಲೆ ಹಿಟ್ಟಿನ ಚಟ್ನಿ ಮತ್ತು ಬಟಾಣಿ ಕುರ್ಮಾ ಜೊತೆಗೆ ತಿಂದರೆ ಅದರ ರುಚಿನೇ ಬೇರೆ.

ಕಡ್ಲೆ ಹಿಟ್ಟಿನ ಚಟ್ನಿ ಮಾಡೋದು ಹೇಗೆ?:
ಹುಣಿಸೆಹಣ್ಣು, ಬೆಲ್ಲವನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಲಾಗುತ್ತದೆ. ಮುಂಜಾನೆಗೆ ಹುಣಿಸೆ ಹಣ್ಣು ಹುಳಿ ಬಿಟ್ಟಿರುತ್ತದೆ. ಅದರಲ್ಲಿ ಕಡ್ಲೆ ಹಿಟ್ಟನ್ನು ಕಲಸಿ, ನಂತರ ಅದರಲ್ಲಿ ಹುರಿದ ಈರುಳ್ಳಿ ತುಂಡುಗಳು, ಸಾಸಿವೆ, ಜೀರಿಗೆ ಹಾಕಿ ಗ್ರಾಹಕರಿಗೆ ಕೊಡ್ತಾರೆ. ಇಡ್ಲಿ, ವಡೆಗೆ ಪ್ರತ್ಯೇಕವಾಗಿ ಸಾಂಬಾರು, ಚಟ್ನಿ ಕೊಡ್ತಾರೆ.

ಹೋಟೆಲ್‌ ಸಮಯ:
ಮುಂಜಾನೆ 6 ರಿಂದ ರಾತ್ರಿ 9.30ರವರೆಗೆ ಮಾತ್ರ, ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ:
ಸಿದ್ದಪ್ಪ ಕಲ್ಲಪ್ಪ ಮಾಳಿ, ಲಕ್ಷ್ಮೀ ಹೋಟೆಲ್‌, ಲಕ್ಷ್ಮೀ ದೇವಾಲಯದ ಪಕ್ಕ, ತಿಕೋಟಾ, ವಿಜಯಪುರ

– ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next