Advertisement

ಲಕ್ಷ್ಮೀ ಹೆಬ್ಟಾಳ್ಕರ್‌ಗೆ “ಕೈ’ಕಮಾಂಡ್‌ ಅಭಯ

09:37 AM Oct 25, 2017 | |

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು 2018ರ ವಿಧಾನ ಸಭೆ ಚುನಾವಣೆ
ಮುಗಿಯುವವರೆಗೂ ಬದಲಾಯಿಸುವುದಿಲ್ಲ ಎಂದು ಹೈಕಮಾಂಡ್‌ ಅಭಯ ನೀಡಿದೆ ಎಂದು ತಿಳಿದು ಬಂದಿದೆ.

Advertisement

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನ ನಡೆದ ಬೆನ್ನಲ್ಲೇ ಲಕ್ಷ್ಮೀ ಹೆಬ್ಟಾಳ್ಕರ್‌ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಎರಡು ವರ್ಷದಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ ಹೋರಾಟ ಹಾಗೂ ಪಕ್ಷದಲ್ಲಿ ತಮ್ಮ ವಿರುದ್ಧ ನಡೆದ ಷಡ್ಯಂತ್ರಗಳ ವಿರುದ್ಧವೂ ಹೋರಾಟ ನಡೆಸಿ ಮಹಿಳಾ ಕಾಂಗ್ರೆಸ್‌ಗೆ ಅಸ್ತಿತ್ವ ತಂದುಕೊಟ್ಟಿರುವುದು, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಆರು ವರ್ಷ ಉತ್ತಮ ಕೆಲಸ ಮಾಡಿ, ಬೆಳಗಾವಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕಾಂಗ್ರೆಸ್‌ ಭವನ ನಿರ್ಮಾಣ ಮಾಡಲು ಶ್ರಮಿಸಿರುವುದಾಗಿ ಹೆಬ್ಟಾಳ್ಕರ್‌ ವಿವರಣೆ ನೀಡಿದ್ದಾರೆಂದು ತಿಳಿದು ಬಂದಿದೆ.

ಅಲ್ಲದೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆ ಬೆಳಗಾವಿಯಲ್ಲಿರುವುದರಿಂದ ಅನಗತ್ಯವಾಗಿ ತಮ್ಮ ವಿರುದ್ಧ ಮರಾಠಿ ಪ್ರೇಮಿ ಎನ್ನುವ ಆರೋಪ ಹೊರಿಸಲಾಗುತ್ತಿದ್ದು, ಮನೆ ಮನೆಗೆ ಕಾಂಗ್ರೆಸ್‌ ಪುಸ್ತಕವನ್ನು ಮರಾಠಿಯಲ್ಲಿ ಮುದ್ರಿಸಿರುವುದನ್ನು ಗಡಿ ಭಾಗದ
ಕಾಂಗ್ರೆಸ್‌ ಶಾಸಕರು ಬಳಸಿಕೊಂಡಿದ್ದಾರೆ. 2018ರ ಚುನಾವಣೆ ಹತ್ತಿರವಿರುವುದರಿಂದ ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದರೆ, ಮಹಿಳಾ ಕಾರ್ಯಕರ್ತೆಯರ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಲಕ್ಷ್ಮೀ ಹೆಬ್ಟಾಳ್ಕರ್‌ ಮನವಿ ಮಾಡಿದ್ದಾರೆ
ಎನ್ನಲಾಗಿದೆ. ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ಕೂಡ ಬದಲಾಯಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ. 2018ರ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಪಕ್ಷಕ್ಕೆ ಸೆಳೆಯಲು ಉತ್ತಮ ಕೆಲಸ ಮಾಡುವಂತೆ ಹೆಬ್ಟಾಳ್ಕರ್‌ಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಹಿರಿಯ ನಾಯಕರ ಬೆಂಬಲ
ಲಕ್ಷ್ಮೀ ಹೆಬ್ಟಾಳ್ಕರ್‌ ಬದಲಾವಣೆ ಮಾಡುವ ವಿಷಯ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮಹಿಳಾ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬಿರುಸಿನ ಚಟುವಟಿಕೆಗಳಿಗೂ ಕಾರಣವಾಗಿದೆ. ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಹಿರಿಯ ನಾಯಕರಾದ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಬೆಂಬಲವಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next