Advertisement

ನಾಯಿಗಳು ಬೊಗಳುತ್ತವೆಂದು ಕಚ್ಚಲು ಹೋಗಬಾರದು: ಸವದಿ

10:08 AM Jan 07, 2020 | Team Udayavani |

– ಗಡಿ ವಿವಾದ ಕೆಣಕಿದ ಮಹಾ ಸಿಎಂ ಠಾಕ್ರೆಗೆ ತಿರುಗೇಟು
– ಶೀಘ್ರವೇ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ
ಬೆಳಗಾವಿ: ನಾಯಿಗಳು ಬೊಗಳುತ್ತವೆ ಎಂದು ನಾವು ಅವುಗಳನ್ನು ಕಚ್ಚಲು ಹೋಗಬಾರದು. ಅವು ತಮ್ಮ ಪಾಡಿಗೆ ಬೊಗಳುತ್ತಿರುತ್ತವೆ ಎಂದು ಗಡಿ ವಿವಾದ ಕೆಣಕುವ ಮಹಾರಾಷ್ಟ್ರ ನಾಯಕರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಾಟಿ ಬೀಸಿದರು.

Advertisement

ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಗಡಿ ವಿಚಾರವಾಗಿ ಅವಿವೇಕದ ಹೇಳಿಕೆ ನೀಡುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಈ ರೀತಿ ಮಾತನಾಡುವ ಮುನ್ನ ತಮ್ಮ ತಂದೆ ಶಿವಸೇನೆ ವರಿಷ್ಠರಾಗಿದ್ದ ಬಾಳಾ ಠಾಕ್ರೆ ಹಾಗೂ ಸಂಬಂಧಿ ರಾಜ್‌ ಠಾಕ್ರೆ ಅವರ ಮಾತುಗಳನ್ನು ಅವಲೋಕನ ಮಾಡಬೇಕು. ಜವಾಬ್ದಾರಿ ಅರಿಯಬೇಕು. ಅವಿವೇಕತನದ ಹೇಳಿಕೆ ಮುಖ್ಯಮಂತ್ರಿಗಳಿಗೆ ಶೋಭೆ ತರುವಂಥದಲ್ಲ ಎಂದರು.

ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಯಾರು ಏನೇ ಹೇಳಿದರೂ ಅಥವಾ ಯಾರೇ ಬಂದರೂ ಬೆಳಗಾವಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.

ಮಹಾರಾಷ್ಟ್ರದವರು ಅನಗತ್ಯವಾಗಿ ಸುಪ್ರೀಂಕೋರ್ಟ್‌ ಕದ ತಟ್ಟಿದ್ದಾರೆ. ಅಲ್ಲಿ ನಮಗೆ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸ ಇದೆ. ಆದಷ್ಟು ಶೀಘ್ರ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಆಗಲಿದೆ ಎಂದರು.

ಪ್ರಚೋದನಕಾರಿ ಹೇಳಿಕೆ ನೀಡಿ ಪುರುಷತ್ವ ಪ್ರದರ್ಶನ: ಈಶ್ವರಪ್ಪ
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರ ಹಾಗೂ ಭಾಷೆಯ ವಿಷಯದಲ್ಲಿ ಮಹಾರಾಷ್ಟ್ರ ಹಾಗೂ ಇಲ್ಲಿನ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ ಪುರುಷತ್ವದ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದರು. ಸುದ್ದಿಗಾರರ ಜತೆ ಮಾತನಾಡಿ, ಕೆಲವರು ಗಡಿ ಹಾಗೂ ಭಾಷೆ ವಿಷಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಬಿಜೆಪಿ ಒಪ್ಪುವುದಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದ ನೆಲ, ಗಡಿ ಹಾಗೂ ಭಾಷೆ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಸರ್ಕಾರ ಬೆಂಬಲ ನೀಡಬಾರದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next