ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಮೇ 20-21ರಂದು ಉಡುಪಿ ಪುರಭವನದಲ್ಲಿ , ತೆಂಕುತಿಟ್ಟು-ಬಡಗುತಿಟ್ಟುಗಳ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಸ್ಪರ್ಧೆ ಇದು. ಇಂತಹ ರಾಜ್ಯಮಟ್ಟದ ಸ್ಪರ್ಧೆ ನಡೆಯುವುದು ರಾಜ್ಯದಲ್ಲೇ ಪ್ರಥಮ.
ಮೇ 21ರಂದು ಸಂಜೆ ಉಡುಪಿ ವಕೀಲರ ಸಂಘದವರು “ಗದಾಯುದ್ಧ’ ಎನ್ನುವ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಿದರು. ಕೋರ್ಟಿನಲ್ಲಿ ಕಕ್ಷಿದಾರರ ಪರ ಇಂಗ್ಲಿಷ್‌ನಲ್ಲಿ ವಾದ ಮಂಡಿಸುವ ವಕೀಲರು ಪೌರಾಣಿಕ ಪ್ರಸಂಗದಲ್ಲಿ, ಯಾವುದೇ ಇಂಗ್ಲಿಷ್ ಪದ ಉಪಯೋಗಿಸದೆ ಸ್ವಚ್ಚ ಕನ್ನಡದಲ್ಲಿ ಅರ್ಥ ಹೇಳುತ್ತಾರೆಂದರೆ ಅದು ಹೆಚ್ಚುಗಾರಿಕೆಯೇ.
ಮಹಾಭಾರತದಲ್ಲಿ ಅತ್ಯಂತ ರೋಚಕ ಕತೆ “ಗದಾಯುದ್ಧ’. ದುರ್ಯೋಧನ ತನ್ನವರೆಲ್ಲ ನೆಲಕಚ್ಚಿದ ಮೇಲೆ, ಸೋತು ಕಂಗಾಲಾಗಿ ಗುರುಗಳೇ ಕಲಿಸಿದ ಪಾಠ ನೀರಿನಲ್ಲಿ ಅವಿತುಕೊಳ್ಳುವುದರ ಮೊರೆ ಹೋಗುತ್ತಾನೆ. ಚಿಕ್ಕಪ್ಪ ಸಂಜಯನಲ್ಲಿ ಕಷ್ಟ ತೋಡಿಕೊಂಡು ವೈಶಂಪಾಯನ ಸರೋವರದಲ್ಲಿ ಅವಿತು ಕುಳಿತುಕೊಳ್ಳುವನು. ಅದನ್ನು ತಿಳಿದ ಭೀಮ, ಧರ್ಮರಾಯರು ಕೃಷ್ಣನನ್ನು ಒಳಗೊಂಡು ಸರೋವರಕ್ಕೆ ಬಂದು ಕೌರವನನ್ನು ನೀರಿನಿಂದ ಹೊರ ಕರೆಯುತ್ತಾರೆ. ಬಳಿಕ ಭೀಮ ಕೌರವನ ನಡುವೆ ಯುದ್ಧವಾಗಿ, ಪರಾಕ್ರಮಿ ಕೌರವ ಭೀಮನನ್ನು ಮೂರ್ಚೆ ಬೀಳಿಸುವನು. ಮೂರ್ಚೆಯಿಂದ ಮೇಲೆದ್ದ ಭೀಮ ಕೌರವರ ನಡುವೆ “ಗದಾಯುದ್ಧ’ವಾಗಿ ಭೀಮ, ಕೌರವನನ್ನು ಕೆಡಹುತ್ತಾನೆ. ಇದು ಕತೆ.
ಕೌರವನಾಗಿ ಉದಯಕುಮಾರ್ ಎಂ. ಅವರ ವೀರೋಚಿತ ಕುಣಿತ, ಯಕ್ಷಗಾನೀಯವಾದ ಮಾತುಗಾರಿಕೆ, ವೇಷ ಭೂಷಣಗಳು ಎಲ್ಲವೂ ಆ ಪಾತ್ರಕ್ಕೆ ಗೌರವವನ್ನು ತಂದುಕೊಟ್ಟಿತು.
ಎರಡನೇ ಮುಖ್ಯ ಪಾತ್ರವಾದ ಭೀಮನನ್ನು ರಾಘವೇಂದ್ರ ಶೆಟ್ಟಿಯವರು ನಿರ್ವಹಿಸಿದರು. ವೀರೋಚಿತ ಕುಣಿತ, ಅದರಂತೆಯೇ ಮಾತುಗಾರಿಕೆ ವೇಷಭೂಷಣ ಎಲ್ಲವೂ ಪೂರಕವಾಗಿ, ಕೌರವನನ್ನು ಮಾತಿನಿಂದಲೇ ನೀರಿನಿಂದ ಏಳುವಂತೆ ಮಾಡುತ್ತಾನೆ.
ಸಂಜಯನಾಗಿ ಅನಿಲ್ ಕುಮಾರ್, ಧರ್ಮರಾಯನಾಗಿ ರಮೇಶ್ ಹೆಗ್ಗಡೆ, ಕೃಷ್ಣನಾಗಿ ಶ್ರೀಶ ಆಚಾರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದರು. ಆದರೆ ಕೃಷ್ಣನ ವೇಷ ಮೆಚ್ಚುಗೆಯಾಗಲಿಲ್ಲ. ಈ ಪ್ರಸಂಗದ ಇನ್ನೊಂದು ಮುಖ್ಯ ಪಾತ್ರ. ಸಾವಿತ್ರಿ ಎಂ. ಶೆಟ್ಟಿ ಅಶ್ವತ್ಥಾಮನಾಗಿ ಪ್ರವೇಶದಲ್ಲೇ ರಂಗಸ್ಥಳವನ್ನು ಹುಡಿಹಾರಿಸಿದರು. ಅವರ ಕುಣಿತ ಮತ್ತು ಮಾತುಗಾರಿಕೆ ಪಾತ್ರವನ್ನು ಮೇಲಕ್ಕೇರಿಸಿತು. ಈ ಪಾತ್ರಧಾರಿ ಹೆಂಗಸು ಎಂದರೆ ಯಾರೂ ನಂಬುವಂತಿರಲಿಲ್ಲ. ಭಾಗವತಿಕೆಯಲ್ಲಿ ನಗರ ಸುಬ್ರಮಣ್ಯ ಆಚಾರ್,ಚಂಡೆಯಲ್ಲಿ ರಾಘವೇಂದ್ರ, ಮದ್ದಲೆಯಲ್ಲಿ ಕೆ.ಜೆ. ಪ್ರಸಾದರು ಮಿಂಚಿದರು.
– ಜಯರಾಂ ನೀಲಾವರ