Advertisement

ವಕೀಲರು ಸಾಮಾಜಿಕ ಎಂಜಿನಿಯರ್‌ಗಳಂತೆ ದೇಶ ಕಟ್ಟಬೇಕು

09:06 PM Dec 14, 2019 | Team Udayavani |

ಮೈಸೂರು: ಜನರು ನೀಡಿದ ಅಧಿಕಾರವನ್ನು ಬಳಸಿ ಬಹುತ್ವದ ಭಾರತವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡಲಾಗುತ್ತಿದೆ ಎಂದು ಅಖೀಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಬಿಕಾಸ್‌ ರಂಜನ್‌ ಭಟ್ಟಾಚಾರ್ಯ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಏರ್ಪಡಿಸಿರುವ ಅಖೀಲ ಭಾರತ ವಕೀಲರ ಒಕ್ಕೂಟದ ಎಂಟನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶ ಕಟ್ಟುವ ಕೆಲಸದಲ್ಲಿ ತೊಡಗಿ: ಭಾರತ ದೇಶವನ್ನು ಒಂದು ದೇಶ-ಒಂದು ಬಣ್ಣ, ಒಂದು ಧರ್ಮಕ್ಕೆ ಸೀಮಿತವಾಗಿಸಲು ದೇಶ ಕಟ್ಟಿದವರು ಬಿಟ್ಟಿಲ್ಲ. ನೂರಾರು ವರ್ಷಗಳ ಹಿಂದಿನಿಂದಲೂ ನಮ್ಮ ದೇಶದ ಸಂವಿಧಾನ ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ನೀಡಿದೆ. ಹಿಂದೂ-ಹಿಂದಿ-ಹಿಂದೂಸ್ತಾನವನ್ನು ನಮ್ಮ ದೇಶದ ಜನರು ಎಂದೋ ತಿರಸ್ಕರಿಸಿದ್ದಾರೆ. ಯಾರೂ ಕೂಡ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ.

ಹೀಗಾಗಿ ವಕೀಲರು ಸಾಮಾಜಿಕ ಎಂಜಿನಿಯರ್‌ಗಳಂತೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದರು. ಇಂದು ಭಾರತ ಜಾತಿಗಳ ಯುದ್ಧದಿಂದ ಕೂಡಿದೆ. ಅಂಬೇಡ್ಕರ್‌ ರಾಜಕೀಯ ಶಕ್ತಿಯಿಂದ ಅಭಿವೃದ್ಧಿ ಸಾಧ್ಯ ಎಂದಿದ್ದರು. ಆದರೆ ರಾಜ್ಯಾಧಿಕಾರ ಜಾತಿ ವ್ಯವಸ್ಥೆಯಲ್ಲಿ ಒಂದಾಗಿ ಹಳ್ಳ ಹಿಡಿಯತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ: ಪ್ರಸ್ತುತ ದಿನಮಾನದಲ್ಲಿ ಜನರೇ ತೀರ್ಪು ನೀಡುವ ಮೂಲಕ ದೇಶವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಕೆಲವು ಬದಲಾವಣೆಯಾಗಬೇಕಾದರೆ ವಕೀಲರು ಶ್ರಮಪಡಬೇಕು. ನಮ್ಮಿಂದಲೇ ದೇಶದಲ್ಲಿ ಕೆಲವು ಬದಲಾವಣೆ ತರಲು ಸಾಧ್ಯ. ದೇಶದ ಅಭಿವೃದ್ಧಿಗಾಗಿ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸಬೇಕಾಗಿದೆ. ಭಾರತದಲ್ಲಿ 29 ಲಕ್ಷ ವಕೀಲರು ನ್ಯಾಯಾಂಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಇವರೆಲ್ಲರೂ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಮೌಲ್ಯಗಳ ಕುಸಿತ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಮಾತನಾಡಿ, ನ್ಯಾಯಾಂಗದ ನ್ಯೂನತೆಯಿಂದಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ನಡೆಯಿತು. ನ್ಯಾಯಾಂಗ ವ್ಯವಸ್ಥೆಯೆ ಪೊಲೀಸರ ಕೈಗೆ ಅನಾಯಸವಾಗಿ ಅಧಿಕಾರ ನೀಡಿದೆ. ಅಲ್ಲಿನ ಸರ್ಕಾರ 21 ದಿನಗಳಲ್ಲಿ ವಿಚಾರಣೆ ನಡೆಸಿ 22ನೇ ದಿನ ಸಾರ್ವಜನಿಕವಾಗಿ ಆರೋಪಿಗಳನ್ನು ಗಲ್ಲಿಗೇರಿಸುವ ಕಾಯ್ದೆ ಮಾಡುತ್ತಿದೆ.

Advertisement

ಇದು ನ್ಯಾಯವೇ? ನ್ಯಾಯಾಲಯ ಕೂಡ 21 ದಿನದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಲು ಸಾಧ್ಯವಿಲ್ಲ. ನಮ್ಮ ನ್ಯೂನತೆಯಿಂದ ಪೊಲೀಸರಿಗೆ ಇಷ್ಟೊಂದು ಧೈರ್ಯ ಬಂದಿದೆ. ಸಾರ್ವಜನಿಕರೂ ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಮೌಲ್ಯಗಳ ಕುಸಿತ ಕಂಡಿದೆ. ನಾಲ್ಕನೇ ಅಂಗವಾದ ಮಾಧ್ಯಮ ಕೂಡ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಖೀಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ಶಂಕರಪ್ಪ, ಹಿರಿಯ ವಕೀಲ ಸಿ.ಎಂ.ಜಗದೀಶ್‌, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಕೆ.ಬಿ.ನಾಯಕ್‌, ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್‌, ಸದಸ್ಯರಾದ ಜೆ.ಎಂ. ಅನಿಲ್‌ಕುಮಾರ್‌, ಎಸ್‌.ಬಸವರಾಜು, ಆಸಿಫ್ ಅಲಿ ಶೇಕ್‌ ಹುಸೇನ್‌, ಎಚ್‌.ಎಲ್‌.ವಿಶಾಲ್‌ ರಘು, ಕೋಟೇಶ್ವರ್‌ ರಾವ್‌, ಶ್ರೀನಿವಾಸಕುಮಾರ್‌, ರಾಮಚಂದ್ರ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next