ನವದೆಹಲಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಸಂಕೀರ್ಣದಲ್ಲಿ ನವೆಂಬರ್ 2ರಂದು ಪೊಲೀಸರು ಮತ್ತು ವಕೀಲರ ನಡುವೆ ನಡೆದ ಘರ್ಷಣೆ ವಿಚಾರ ಬುಧವಾರವೂ ಮುಂದುವರಿದಿದ್ದು, ವಕೀಲರು ದೆಹಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಆರು ಜಿಲ್ಲೆಗಳಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದು, ಕೋರ್ಟ್ ಕಲಾಪಕ್ಕೆ ಗೈರುಹಾಜರಾಗಿದ್ದಾರೆ.
ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭವಿಸಿದ್ದ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆ ಪ್ರಕರಣದ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ ನಲ್ಲಿ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ವಕೀಲರ ಹಲ್ಲೆ ಪ್ರಕರಣದಲ್ಲಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ದೆಹಲಿ ಪೊಲೀಸರು ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಏತನ್ಮಧ್ಯೆ ಮಂಗಳವಾರ ದಿಲ್ಲಿ ಪೊಲೀಸ್ ಕೇಂದ್ರ ಕಚೇರಿ ಬಳಿ ಪೊಲೀಸರು ಮತ್ತು ಅಧಿಕಾರಿಗಳು ನಡೆಸಿದ ಪ್ರತಿಭಟನೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ದೆಹಲಿ ಪೊಲೀಸ್ ಕಮೀಷನರ್ ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಮಂಗಳವಾರ ಪೊಲೀಸ್ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು.
ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳಾ ವಕೀಲರು ಪಟಿಯಾಲಾ ಹೌಸ್ ಕೋರ್ಟ್ ನಿಂದ ಇಂಡಿಯಾ ಗೇಟ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ. ನವೆಂಬರ್ 2ರ ಘಟನೆ ಖಂಡಿಸಿ ವಕೀಲರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.