ಬೀದರ: ಬೀದರ ಜಿಲ್ಲಾ ವಕೀಲರ ಸಂಘದ ಮೂರು ಅಂತಸ್ಥಿನ ಕಟ್ಟಡ ಇಡೀ ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಮಾದರಿಯಾಗಿದೆ ಎಂದು ಬೆಂಗಳೂರು ಉತ್ಛ ನ್ಯಾಯಾಲಯದ ನ್ಯಾಯಮೂರ್ತಿಗಳೂ ಹಾಗೂ ಬೀದರ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶಂಕರ ಗಣಪತಿ ಪಂಡಿತ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಜಿಲ್ಲಾ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು 2.12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡದ ಸದುಪಯೋಗವಾಗಲಿ ಎಂದು ಸಲಹೆ ನೀಡಿದರು. ಮೂಲ ಸೌಕರ್ಯಗಳುಳ್ಳ ಈ ಕಟ್ಟಡದಲ್ಲಿ ಕಂಪ್ಯೂಟರ್ ಸೇರಿದಂತೆ ತಾಂತ್ರಿಕ ಸೌಲತ್ತುಗಳನ್ನು ಒದಗಿಸಲು ಹೈಕೋರ್ಟ್ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನು ಪರಿಣಾಮಕಾರಿ ರೀತಿಯಲ್ಲಿ ಇದನ್ನು ಉಪಯೋಗಿಸಲು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಸಿ ಚಂದ್ರಶೇಖರ ಮಾತನಾಡಿ, ದಿ| ರಾಮಚಂದ್ರ ಗಂದಗೆ ಅವರ ಕಾಲದಲ್ಲಿ ಈ ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂದಿನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಾ| ಶಶಿಕಲಾ ಉರಣಕರ್ ಅವರು ಶಿಲನ್ಯಾಸ ಮಾಡಿದರು. ನ್ಯಾ|ಹಂಚಾಟೆ ಸಂಜೀವ ಕುಮಾರ ಅವರ ಕಾಲದಲ್ಲಿ ಆದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳಲಾಗಿತ್ತಾರೂ ಲಿಫ್ಟ್ ಸೌಕರ್ಯದಿಂದ ವಂಚಿತವಾದ ಕಾರಣ ಕಟ್ಟಡ ಕಾಮಗಾರಿ ವಿಳಂಬವಾಯಿತು. ಇದೇ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿತ್ತು. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ಲೋಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ ಪಿ.ಆರ್., ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶ ಚಂದ್ರಶೇಖರ ರೆಡ್ಡಿ, ಸಿವಿಲ್ ನ್ಯಾಯಾಧೀಶ ನಿರ್ಮಲಾದೇವಿ, ನ್ಯಾಯಧೀಶರಾದ ಜೀವನರಾವ್ ಕುಲಕರ್ಣಿ, ಯಮನಪ್ಪ, ಶ್ರೇಯಾಂಶ ದೊಡ್ಡಮನಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ರಾಘವೇಂದ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಸೇರಿದಂತೆ ಇತರೆ ನ್ಯಾಯಾಧೀಶರು, ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರು ಹಾಜರಿದ್ದರು.
ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶರಾದ ನ್ಯಾ| ಮನಗೂಳಿ ಪ್ರೇಮಾವತಿ ಸ್ವಾಗತಿಸಿದರು. ಜಿಲ್ಲಾ ವಕೀಲರ
ಸಂಘದ ಕಾರ್ಯದರ್ಶಿ ಸಂತೋಷ ತರನಳ್ಳೆ ನಿರೂಪಿಸಿದರು. ಉಪಾಧ್ಯಕ್ಷ ಸತೀಶ್ ಕುಲಕರ್ಣಿ ವಂದಿಸಿದರು.