ಬೆಂಗಳೂರು: ವಕೀಲರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹಾಗೂ 25ಕ್ಕೂ ಹೆಚ್ಚು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಮಂಜೂರ್ ಅಲಿಯಾಸ್ ದೂನ್‌ನನ್ನು ಬಂಧಿಸಲಾಗಿದೆ.
ಇದೇ ವೇಳೆ ಕಾನೂನು ಸಂಘರ್ಷಕ್ಕೊಳಗಾದ ಆತನ ಪುತ್ರನನ್ನು ದೇವರ ಜೀವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಘರ್ಷಕ್ಕೊಳಗಾದ ಪುತ್ರನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ ಕಾರು, ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಇಬ್ಬರು ಆರೋಪಿಗಳಾದ ಅಬ್ದುಲ್ ಸೇರಿ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಕಳೆದ ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ದೂರುದಾರ ಶ್ರೀಆಷ್ಪಾಕ್ ಅಹಮದ್ ಎಂಬುವರು ಕುಟುಂಬ ಸಮೇತ ಕನಕನಗರದಿಂದ ವಾಪಸ್ ಜೋಸೇಫ್ ರೆಡ್ಡಿ ಲೇಔಟ್‌ನಲ್ಲಿರುವ ಮನೆಗೆ ಹೋಗುತ್ತಿದ್ದರು. ಆಗ ನಾಲ್ವರು ಆರೋಪಿಗಳು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರು, ಮೊಬೈಲ್ ಕಳವು ಮಾಡಿದ್ದರು. ಈ ಸಂಬಂಧ ಶ್ರೀಆಷ್ಪಾಕ್ ದೂರು ನೀಡಿದ್ದರು. ತಡರಾತ್ರಿಯೇ ಠಾಣಾಧಿಕಾರಿ ಪ್ರಕಾಶ್ ನೇತೃತ್ವದ ತಂಡ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾದಾಗ, ಮಂಜೂರ್ ಮಾಹಿತಿ ಲಭ್ಯವಾಗಿ ಆತನ ಅಡಗಿರುವ ಸ್ಥಳದ ಮೇಲೆ ದಾಳಿ ನಡೆಸಿ ಕಾರು ಪತ್ತೆಯಾ ಗಿದೆ. ಬಳಿಕ ಅಪ್ಪ-ಮಗನನ್ನು ಬಂಧಿಸಲಾಗಿತ್ತು.
ವಕೀಲರೇ ಟಾರ್ಗೆಟ್: ಶಿವಾಜಿನಗರದ ರೌಡಿಶೀಟರ್ ಆಗಿರುವ ಮಂಜೂರ್ ವಿರುದ್ಧ 25ಕ್ಕೂ ಹೆಚ್ಚು ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. “ತಾನೂ ಜೈಲಿಗೆ ಹೋದಾಗ, ಬಿಡುಗಡೆ ಮಾಡಲು ವಕೀಲರು ನೆರವು ನೀಡುತ್ತಿರಲಿಲ್ಲ’. ಹೀಗಾಗಿ ವಕೀಲರನ್ನು ಗುರಿಯಾಗಿಸಿಕೊಂಡು ಅವರ ಕಾರು, ಇತರೆ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ. ಆದರಿಂದ ಆರೋಪಿ, ದೂರುದಾರರಾದ ಶ್ರೀಆಷ್ಪಾಕ್ ಸಹ ವಕೀಲರಾಗಿದ್ದರಿಂದ ಅವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ರಾಜಕೀಯ ಮುಖಂಡರ ಹೆಸರು ಬಳಕೆ: 2018ರಲ್ಲಿ ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ಅವರ ಮೊಮ್ಮಗ ರೆಹಮಾನ್ ಹೆಸರು ಹೇಳಿಕೊಂಡು ಆರೋಪಿ ಮಂಜೂರ್, ಮಾಜಿ ಕಾರ್ಪೋರೆಟರ್ ಮುಜಾಫರ್‌ಗೆ ಕರೆ ಮಾಡಿ, “ಮಂಜೂರ್ ನಮ್ಮ ತಾತ ಜಾಫರ್ ಷರೀಫ್ ಅವರಿಗೆ ಸಾಕಷ್ಟು ಕೆಲಸ ಮಾಡಿದ್ದಾನೆ. ಸದ್ಯ ಆತ ಜೈಲು ಸೇರಿದ್ದಾನೆ. ಆತನಿಗೆ ಸಹಾಯ ಮಾಡುವಂತೆ’ ಕೋರಿದ್ದ. ಅದರಿಂದ ಮಾಜಿ ಕಾರ್ಪೋರೆಟರ್ ಆರೋಪಿಗೆ 50 ಸಾವಿರ ರೂ. ನಗದು ಮತ್ತು ಚಿನ್ನದ ಸರ ನೀಡಿದ್ದರು. ಹೀಗೆ ರಾಜಕೀಯ ಮುಖಂಡರ ಸಂಬಂಧಿ ಎಂದು ಹೇಳಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ರೌಡಿಶೀಟರ್ ಮಂಜೂರ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಕೇಸ್‌ಗಳಿವೆ. ಕೆಲವರು ಈತನ ಭಯದಿಂದ ದೂರು ನೀಡಿಲ್ಲ. ಇದೀಗ ಆರೋಪಿ ಬಂಧಿಸಲಾಗಿದೆ. ವಂಚನೆ ಅಥವಾ ಸುಲಿಗೆಗೊಳಗಾದ ವ್ಯಕ್ತಿಗಳು ದೂರು ನೀಡಬಹುದು. ●
ಭೀಮಾಶಂಕರ್ ಗುಳೇದ್, ಪೂರ್ವ ವಿಭಾಗ ಡಿಸಿಪಿ