ನವದೆಹಲಿ: ವಕೀಲೆ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಮಂಗಳವಾರ (ಫೆ.07) ಪ್ರಮಾಣವಚನ ಸ್ವೀಕರಿಸಿದ್ದು, ಮತ್ತೊಂದೆಡೆ ನ್ಯಾಯಾಧೀಶರಾಗಿ ಬಡ್ತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಬಿಜೆಪಿ ಜತೆ ಗುರುತಿಸಿಕೊಂಡಿದ್ದ ವಕೀಲೆ ಲಕ್ಷ್ಮಣಚಂದ್ರ ವಿಕ್ಟೋರಿಯಾ ಅವರನ್ನು ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ನೇಮಿಸಿದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ:ಕುಮಾರಸ್ವಾಮಿಯದ್ದು ಮನೆ-ಊರು ದಾಟಿದ ಸಾಮರ್ಥ್ಯ: ಸಿ.ಟಿ.ರವಿ ಟಾಂಗ್
ಈ ಅರ್ಜಿಯ ತುರ್ತು ವಿಚಾರಣೆಗೆ ಸಮ್ಮತಿಸಿದ್ದ ಸುಪ್ರೀಂಕೋರ್ಟ್, ನಾವು ಈ ಲಿಖಿತ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ.ಅರ್ಹತೆಯನ್ನು ಪರಿಗಣಿಸುವುದಾಗಿ ಜಸ್ಟೀಸ್ ಸಂಜೀವ ಖನ್ನಾ ಮತ್ತು ಭೂಷಣ್ ರಾಮಕೃಷ್ಣ ಗವಾಯಿ ಅವರನ್ನೊಳಗೊಂಡ ವಿಶೇಷ ಪೀಠ ತಿಳಿಸಿದೆ.
ಅರ್ಜಿ ವಿಚಾರಣೆ ಆರಂಭದಲ್ಲಿ ಜಸ್ಟೀಸ್ ಖನ್ನಾ ಅವರು, ಅರ್ಹತೆ ಮತ್ತು ಯೋಗ್ಯತೆ ನಡುವೆ ವ್ಯತ್ಯಾಸವಿದೆ. ಅರ್ಹತೆಯ ಮೇಲೆ ಒಂದು ಸವಾಲು ಇರಬಹುದು. ಆದರೆ ಯೋಗ್ಯತೆ…ನ್ಯಾಯಾಲಯ ಆ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ..ಹಾಗಾದರೆ ಇಡೀ ಪ್ರಕ್ರಿಯೆ ಬುಡಮೇಲಾಗುತ್ತದೆ ಎಂದು ಪೀಠ ಗಮನಿಸಿರುವುದಾಗಿ ಹೇಳಿತ್ತು.
ಬಿಜೆಪಿಗೂ ಗೌರಿಗೂ ನಂಟೇನು?
2010ರಲ್ಲಿ ವಿಕ್ಟೋರಿಯಾ ಗೌರಿಯನ್ನು ತಮಿಳುನಾಡಿನ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 2014ರ ಲೋಕಸಭಾ ಚುನಾವಣೆ ವೇಳೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. 2015ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ ಹಿರಿಯ ವಕೀಲೆಯನ್ನಾಗಿ ನೇಮಕ ಮಾಡಿತ್ತು.ನಂತರ ಐದು ವರ್ಷದ ಬಳಿಕ ಆಕೆಯನ್ನು ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠದಲ್ಲಿ ಕೇಂದ್ರ ಸರ್ಕಾರದ ಪರ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.