ಬೆಂಗಳೂರು: ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣದ ಆರೋಪಿ ಎ.ನಾರಾಯಣ ಪುರದ ಕಾಂಗ್ರೆಸ್ ಪಾಲಿಕೆ ಸದಸ್ಯ ವಿ. ಸುರೇಶ್‌ನನ್ನು ಬಂಧಿಸಿರುವ ಸಿಐಡಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿ. ಸುರೇಶ್‌ನನ್ನು ಶುಕ್ರವಾರ ಸಂಜೆ ತಮಿಳುನಾಡಿನ ಸೇಲಂ ಜಿಲ್ಲೆಯ ಎರಕಾಡ್ ರೆಸಾರ್ಟ್‌ನಲ್ಲಿ ಬಂಧಿಸಿ ಕರೆತರಂದು ವಿಚಾರಣೆ ನಡೆಸಲಾಯಿತು. ಬಳಿಕ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಸುರೇಶ್ ವಿಚಾರಣೆ ವೇಳೆ “ತಮ್ಮ ಸಂಬಂಧಿ ಗೋವರ್ಧನ್ ಎಂಬುವವರ ಮನೆ ಕಟ್ಟುತ್ತಿದ್ದ ಸ್ವಲ್ಪ ಜಾಗವನ್ನು ಧರಣಿ ಕುಟುಂಬ ಅತಿಕ್ರಮಿಸಿಕೊಂಡಿತ್ತು. ಹೀಗಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಯತ್ನ ಮಾಡಿದ್ದೆ. ನಾನು ಧರಣಿ ಹಾಗೂ ಆಕೆಯ ಕುಟುಂಬಕ್ಕೆ ಕಿರುಕುಳ ನೀಡಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾನೆ ಅಧಿಕಾರಿ ತಿಳಿಸಿದರು.
ಡಿ.31ರಂದು ಮಹದೇವಪುರದ ತಮ್ಮ ಮನೆಯಲ್ಲಿ ಧರಣಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾಲಿಕೆ ಸದಸ್ಯ ಸುರೇಶ್ ಕಿರುಕುಳದಿಂದ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಕೀಲೆ ತಾಯಿ ಮಹದೇವಪುರ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಕೆಲ ದಿನಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಸುರೇಶ್‌ಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದರು.