Advertisement
ಉಯಿಲು ಯಾವಾಗ ಜಾರಿಗೆ ಬರುತ್ತದೆ?ಉಯಿಲಿನಲ್ಲಿ ಮಗ, ಮಗಳು ಅಥವಾ ಸೋದರ ಸಂಬಂಧಿಗೆ ಆಸ್ತಿಯ ಹಕ್ಕು ಬರೆದಿರುತ್ತಾರೆ ಅಂದುಕೊಳ್ಳಿ. ಆ ಆಸ್ತಿಗಳ ಮೇಲಿನ ಹಕ್ಕು ಕೊಡಲಾದವರಿಗೆ ಬರುವುದು ಉಯಿಲು ಬರೆದವನ ಮರಣಾನಂತರವೇ. ಅದಕ್ಕಿಂತ ಮುಂಚೆ ಆ ಆಸ್ತಿಗಳ ಮೇಲೆ ಯಾರಿಗೂ, ಯಾವ ರೀತಿಯ ಹಕ್ಕೂ ಬರುವುದಿಲ್ಲ. ಉದಾಹರಣೆಗೆ “ಎ’ ಎಂಬುವನಿಗೆ ಒಂದು ಉಯಿಲಿನ ಮೂಲಕ ಕೆಲವು ಆಸ್ತಿಗಳನ್ನು ಕೊಡಲಾಗಿದೆ ಎಂದು ತಿಳಿಯೋಣ. ಉಯಿಲುಕರ್ತನ ಜೀವಿತ ಕಾಲದಲ್ಲಿ “ಎ’ ನಿಧನ ಹೊಂದಿದರೆ ಏನು ಮಾಡಬೇಕು? ಅಂಥ ಸಂದರ್ಭದಲ್ಲಿ “ಎ’ಯ ವಾರಸುದಾರರಿಗೆ ಆ ಹಕ್ಕು ವರ್ಗಾಯಿಸಲ್ಪಡುತ್ತದೆಯೇ ಎಂಬ ಪ್ರಶ್ನೆ ಜೊತೆಯಾಗುತ್ತದೆ ತಾನೆ? ನೆನಪಿಡಿ. ಯಾವುದೇ ಉಯಿಲು ಜಾರಿಗೆ ಬರುವುದು, ಉಯಿಲುಕರ್ತ ಮರಣಾನಂತರ ಮಾತ್ರವಾದುದರಿಂದ ಮತ್ತು ಆ ಉಯಿಲನ್ನು ಬರೆದ ವ್ಯಕ್ತಿಯ ಜೀವಿತ ಕಾಲದಲ್ಲಿ ಎಷ್ಟೋ ಬಾರಿ ಬದಲಾಯಿಸಬಹುದಾದ ಸಂಭವ ಇರುವುದರಿಂದ, ಇಲ್ಲವೇ ಆ ಆಸ್ತಿ ಉಯಿಲು ಜಾರಿಗೆ ಬರುವ ಕಾಲಕ್ಕೆ ಪೂರ್ಣ ಕರಗಿಹೋಗಬಹುದಾದ ಸಂದರ್ಭಗಳಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. “ಎ’ಯ ನಿಧನಾನಂತರ ಉಯಿಲುಕರ್ತ ಬೇರೆಯ ಉಯಿಲನ್ನು ಬರೆಯಬೇಕಾಗುತ್ತದೆ. ಹಾಗೆ ಬರೆಯದಿದ್ದರೆ “ಎ’ಗೆ ಕೊಟ್ಟಿದ್ದ ಆಸ್ತಿಗಳು ವಾರಸಾ ಕಾಯಿದೆ ನಿಯಮದಂತೆ ಹಂಚಲ್ಪಡುತ್ತದೆ.
ಉಯಿಲುಕರ್ತ ತಾನು ಉಯಿಲಿನಲ್ಲಿ ಬರೆಯುವ ನಿರ್ದೇಶನದಂತೆ ಆಸ್ತಿಗಳನ್ನು ವಿತರಣೆ ಮಾಡಲು ಒಬ್ಬ ಅಥವಾ ಒಬ್ಬಕ್ಕಿಂತ ಹೆಚ್ಚು ನಿರ್ವಾಹಕನನ್ನು ನೇಮಕ ಮಾಡಬಹುದು. ಆ ನಿರ್ವಾಹಕ, ಉಯಿಲುಕರ್ತನ ಮರಣಾನಂತರ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡು, ಉಯಿಲಿನಲ್ಲಿ ಬರೆದಿರುವ ಹಾಗೆ ಸೇರಬೇಕಾದವರಿಗೆ ಹಂಚುತ್ತಾನೆ. ನಿರ್ವಾಹಕನನ್ನು ನೇಮಕ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಈ ನಿರ್ವಾಹಕ ಆಡಬಾರದ ಆಟ ಆಡಬಹುದು. ಆಸ್ತಿಗೆ ಹಕ್ಕುದಾರ ಆಗುವವನಿಂದ ಕಮಿಷನ್ ಪಡೆಯಲು ಮುಂದಾಗಬಹುದು. ಅಂದಹಾಗೆ, ಉಯಿಲಿನಲ್ಲಿ ನಿರ್ವಾಹಕನನ್ನು ನೇಮಕ ಮಾಡಲೇಬೇಕೆಂದು ಕಡ್ಡಾಯವೇನೂ ಇಲ್ಲ. ಅಪ್ರಾಪ್ತ ವಯಸ್ಕನ ಉಯಿಲು
ಒಬ್ಬ ಅಪ್ರಾಪ್ತ ವಯಸ್ಕನಾದ ವ್ಯಕ್ತಿ ತನ್ನ ಉಯಿಲನ್ನು ಬರೆಯಲು ಅವಕಾಶವಿಲ್ಲ. ಹಾಗೆಂದ ಮೇಲೆ ಅವನಿಗೆ ಆಸ್ತಿಪಾಸ್ತಿಗಳೇನಾದರೂ ಇದ್ದು, ಅವನು ಅಪ್ರಾಪ್ತ ವಯಸ್ಕನಾಗಿದ್ದಾಗಲೇ ತೀರಿಕೊಂಡರೆ ಅದು ಯಾರಿಗೆ ಸೇರಬೇಕು ಅಂದಿರಾ? ಅವನು ಹಿಂದೂ ಆಗಿದ್ದರೆ ಹಿಂದೂ ವಾರಸ ಕಾಯಿದೆಯ ಅನುಸೂಚಿಯಲ್ಲಿ ಸೂಚಿಸಿರುವ ವಾರಸುದಾರರು ಆಸ್ತಿಗೆ ಹಕ್ಕುದಾರರಾಗುತ್ತಾರೆ. ಅಪ್ರಾಪ್ರ ವಯಸ್ಕನಂತೆಯೇ, ಬುದ್ಧಿ ವಿಕಲ್ಪವಾದವರು ಕೂಡ ಉಯಿಲನ್ನು ಬರೆಯುವ ಹಾಗಿಲ್ಲ. ಹಾಗೆಂದ ಮೇಲೆ ಇವರುಗಳ ಗಾರ್ಡಿಯನ್ ಆದವರು ಕೂಡ ಬರೆಯಲು ಸಾಧ್ಯವಿಲ್ಲ.
Related Articles
(ಕೃಪೆ: ನವ ಕರ್ನಾಟಕ ಪ್ರಕಾಶನ)
Advertisement