ಹುಣಸೂರು: ಯೂನಿಫಾರಂ ಧರಿಸಿದ ಪೊಲೀಸರಿಗೆ ಜಾತಿ, ಧರ್ಮ ಮತ ಯಾವುದೂ ಇರುವುದಿಲ್ಲ. ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆಯಷ್ಟೇ ಗುರಿ ಆಗಿರುತ್ತದೆ, ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ-ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅಭಿಪ್ರಾಯಪಟ್ಟರು.
ಎಡಿಜಿಪಿ ಹುಣಸೂರು ಭೇಟಿ ವೇಳೆ ಇಲಾಖೆಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ತಾಲೂಕಿನ ಹಲವು ಜ್ವಲಂತ ಸಮಸ್ಯೆಗಳ ಕುರಿತು ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದೀರಿ, ಅನ್ಯಾಯಕ್ಕೆ ಒಳಗಾದವರು ಗುಂಪುಕಟ್ಟಿಕೊಂಡು ಬರುವ ಬದಲು, ನೊಂದವರು ನೇರವಾಗಿ ಬಂದು ದೂರು ನೀಡಲಿ. ಮನುಷ್ಯರ ಮನಸ್ಥಿತಿಯೂ ಬದಲಾಗಬೇಕು. ಈ ನಿಟ್ಟಿನಲ್ಲಿ ಮನಪರಿವರ್ತನೆ ಕಾರ್ಯ ಪೊಲೀಸರು ಮಾಡಬೇಕಿದೆ ಎಂದು ಹೇಳಿದರು.
ಲಂಚಮುಕ್ತ ಠಾಣೆಗಳಾಗಿಸಿ: ದಸಂಸ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಕಟ್ಟೆಮಳಲವಾಡಿ ರತ್ನಪುರಿ ಗ್ರಾಮದಲ್ಲಿ ಮಾದಕ ವಸ್ತುಗಳು ಅವ್ಯಹತವಾಗಿ ಮಾರಾಟವಾಗುತ್ತಿವೆ, ಯುವಜನರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ರಾಜಕಾರಣಿಗಳ, ಹಣವಂತರ ಉಪಟಳಗಳಿಂದ ಪೊಲೀಸ್ ಠಾಣೆಗಳು ಲಂಚಮುಕ್ತವಾಗಲು ಕ್ರಮವಾಗಬೇಕು ಎಂದು ಹೇಳಿದರು.
ಪುಂಡರ ಹಾವಳಿ ತಪ್ಪಿಸಿ: ತಾಲೂಕು ಆದಿಜಾಂಭವ ಸಂಘದ ಡಿ.ಕುಮಾರ್ ಮಾತನಾಡಿ, ತಾಲೂಕಿನಲ್ಲಿಬಾಲ್ಯವಿವಾಹ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿಯುವತಿಯರನ್ನು ಬಲೆಬೀಳಿಸಿಕೊಂಡು ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಫೋಕ್ಸೋ ಕಾಯ್ದೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.
ಸಂಘದ ಅಧ್ಯಕ್ಷ ಶಿವಣ್ಣ, ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ಬಿಳಿಕೆರೆ ಪೊಲೀಸ್ ಠಾಣೆಯ ರವಿಕುಮಾರ್ ದಲಿತರಿಗೆ ರಕ್ಷಣೆ ಕೊಡದೆ, ಉಳ್ಳವರ ಪರ ನಿಂತುಅನ್ಯಾಯ ಮಾಡುತ್ತಿದ್ದಾರೆ. ಕರಿಮುದ್ದನಹಳ್ಳಿ ಗ್ರಾಮದದಲಿತರ ಮೇಲೆ ದೌರ್ಜನ್ಯ ನಡೆದರೂ ರಕ್ಷಣೆ ಕೊಡಲಿಲ್ಲ ಎಂದು ದೂರಿದರು.
ಬಲ್ಲೇನಹಳ್ಳಿ ಕೆಂಪರಾಜು ಮಾತನಾಡಿ, ಲಂಚದ ಹಾವಳಿಯಿಂದ ಪೊಲೀಸರಿಂದ ನೊಂದವರಿಗೆ ರಕ್ಷಣೆಸಿಗದೆ ತೊಂದರೆ ಆಗಿದೆ ಎಂದರು. ವಕೀಲ ಪುಟ್ಟರಾಜು ಮಾತನಾಡಿ, ಹಳೇ ರೌಡಿ ಲಿಸ್ಟ್‌ಗಳನ್ನು ಪುನರ್ ಪರಿಶೀಲಿಸಲು ಮನವಿ ಮಾಡಿದರು.
ಸಭೆಯಲ್ಲಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಎಸ್‌ಪಿ ಆರ್.ಚೇತನ್, ಅಡಿಷನಲ್ ಎಸ್‌ಪಿ ಶಿವಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಮೂರು ಠಾಣೆಗಳ ಇನ್ಸ್ ಪೆಕ್ಟರ್‌ಗಳು, ಮುಖಂಡರಾದ ಕುಮಾರ್, ಫಜಲುಲ್ಲಾ, ಪುಟ್ಟರಾಜು, ಸತ್ಯಪ್ಪ, ಸಯ್ಯದ್ ಅಹಮದ್ ಷಾ, ರಮೇಶ್, ಶಿವರಾಜ್, ಎ.ಪಿ.ಸ್ವಾಮಿ ಇತರರು ಇದ್ದರು.