ವಿಜಯಪುರ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ ಜೈಲು ಪಾಲಾಗಿದ್ದಾರೆ ಎಂದು ಸಿ.ಪಿ.ಯೋಗೇಶ್ವರ ಹೇಳಿಕೆ ಸರಿಯಲ್ಲ. ಹಾಸನದಲ್ಲಿ ಪ್ರಜ್ವಲ್ ಸಂಸದರಾಗಿರಲಿಲ್ಲವೇ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಂಸದ ಡಿ.ಕೆ.ಸುರೇಶ ಸಹೋದರರು ಚಿತ್ರನಟ ದರ್ಶನ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡುವ ಚಿಂತನೆ ನಡೆಸಿದ್ದರೆಂಬ ವಿಷಯ ನನ್ನ ಗಮನಕ್ಕಿಲ್ಲ. ಇಷ್ಟಕ್ಕೂ ದರ್ಶನ ಹತ್ಯೆ ಪ್ರಕರಣದ ಆರೋಪಿ ಆಗುವ ಮುನ್ನ ಇಂಥ ವಿಷಯ ಚರ್ಚೆಯಾಗಿದ್ದರೆ ತಪ್ಪೇನಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸಂಸದರಾಗಿರಲಿಲ್ಲವೇ, ಸ್ಪರ್ಧೆಯ ಬಳಿಕ ಅವರ ವಿರುದ್ಧ ದೂರು ಕೇಳಿ ಬರಲಿಲ್ಲವೇ ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ ಹೇಳಿಕೆಗೆ ತಿರುಗೇಟು ನೀಡಿದರು.
ಹತ್ಯೆ ಪ್ರಕರಣದ ಪ್ರಮುಖ ಆರೋಪಿ ದರ್ಶನ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನು ತನ್ನ ಕೆಲಸ ಮಾಡಲಿದ್ದು, ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿದೆ. ಈ ಬಗ್ಗೆ ಸ್ವಯಂ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪ್ರಕರಣ ನ್ಯಾಯಾಲಯದ ಹಂತದಲ್ಲಿದೆ. ಹೈಕೋರ್ಟ್ ಕೂಡ ಈಗ ಅವರಿಗೆ ಜಾಮೀನು ನೀಡಿದೆ. ಇದರಲ್ಲಿ ದ್ವೇಷ ರಾಜಕೀಯ ಪ್ರಶ್ನೆ ಎಲ್ಲಿದೆ. ಪೋಕ್ಸೋ ಪ್ರಕರಣ ಕೇಂದ್ರದ ಕಾನೂನು, ಈ ಕುರಿತು ಅರಿಯಲು ಬಿಜೆಪಿ ನಾಯಕರಿಗೆ ಹೇಳಿ ಎಂದು ಕುಟುಕಿದರು.
ಮುರುಘಾ ಮಠದ ಶರಣರ ಪ್ರಕರಣದಲ್ಲಿ ಪೋಕ್ಸೋ ಪ್ರಕರಣ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವುರುದ್ಧವೂ ದೂರು ದಾಖಲಾಗಿದೆ. ಹಿರಿಯ ರಾಜಕೀಯ ನಾಯಕರು. ಅವರ ವಿರುದ್ಧ ರಾಜಕೀಯ ದ್ವೇಷ ಸಾಧಿಸುವ ಪ್ರಶ್ನೆ ಇಲ್ಲ. ಪ್ರಜ್ವಲ್, ದರ್ಶನ ಸೇರಿದಂತೆ ಯಾವುದೇ ಹೈಪ್ರೋಫೈಲ್ ಪ್ರಕರಣ ಇದ್ದರೂ ಕಾನೂನು ತನ್ನ ಕೆಲಸ ಮಾಡುತ್ತದೆ. ಕಾನೂನಿಗೆ ಹೈಫ್ರೋಫೈಲ್, ಲೋಫ್ರೋಫೈಲ್ ಎಂವುದೇನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದರು.
ಹತ್ಯೆಯಂಥ ಗಂಭೀರ ಆರೋಪ ಎದುರಿಸುತ್ತಿರುವ ಚಿತ್ರನಟ ದರ್ಶನ ರಾಜ್ಯ ಸರ್ಕಾರದ ಕೃಷಿ ರಾಯಭಾರಿಯಾಗಿ ಮುಂದುವರೆಸಲು ಸಾಧ್ಯವಿಲ್ಲ. ನಿರ್ದೋಷಿ ಎಂದಾಗಿ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಈ ಬಗ್ಗೆ ಯೋಚನೆ ಎಂದರು.