Advertisement

ನನ್ನ ಮನೆ ಮೇಲೂ ಐಟಿ ದಾಳಿ ನಡೆಯಲಿ

12:11 PM Apr 27, 2019 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಯು ರಾಜಕೀಯ ಪ್ರೇರಿತ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದೆ. ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನ ಮನೆಯ ಮೇಲೂ ಐಟಿ ದಾಳಿ ನಡೆಯಲಿ ಎಂದು ಹೇಳಿದ್ದಾರೆ.

Advertisement

ಶುಕ್ರವಾರ ಮಧ್ಯಪ್ರದೇಶದಲ್ಲಿ ಚುನಾವಣ ಪ್ರಚಾರದಲ್ಲಿ ಮಾತ ನಾಡುತ್ತಾ ಆ ರಾಜ್ಯದ ಸಿಎಂ ಆಪ್ತರ ನಿವಾಸಗಳ ಮೇಲೆ ನಡೆದ ಐಟಿ ದಾಳಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. “ತಪ್ಪು ಮಾಡಿದ್ದಕ್ಕಾಗಿ ಅವರ ನಿವಾಸಗಳ ಮೇಲೆ ದಾಳಿಯಾಯಿತು. ಅಂಥ ತಪ್ಪುಗಳನ್ನು ಮೋದಿ ಮಾಡಿದರೂ, ಅವರ ಮನೆ ಮೇಲೂ ದಾಳಿ ನಡೆಯಬೇಕು’ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಕಾಂಗ್ರೆಸ್‌ನ ಸಂಸ್ಕೃತಿಯಲ್ಲಿ ಭ್ರಷ್ಟಾಚಾರವೇ ಮಾನದಂಡ. ಅವರು ಕಳ್ಳತನವನ್ನೂ ಮಾಡು ತ್ತಾರೆ, ಧ್ವನಿಯನ್ನೂ ಎತ್ತುತ್ತಾರೆ. ತುಘಲಕ್‌ ರೋಡ್‌ ಹಗರಣದಲ್ಲಿ ಭಾಗಿ ಯಾ ಗಿರುವ ಆ ಪಕ್ಷವು, ಅದೇ ಹಣವನ್ನು ಅಧ್ಯಕ್ಷ ರಾಹುಲ್‌ಗಾಂಧಿ  ಅವರ ಚುನಾವಣ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ನೋಟು ಅಮಾನ್ಯ ಮಾಡಿದ್ದರಿಂದ ಕಾಂಗ್ರೆಸ್‌ಗೆ ಆಪ್ತರಾಗಿರುವ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಜನರಿಗೆ ಸಮಸ್ಯೆ ಉಂಟಾಯಿತು. ಅದಕ್ಕಾಗಿಯೇ ಕಾಂಗ್ರೆಸ್‌ ನನ್ನನ್ನು ಟಾರ್ಗೆಟ್‌ ಮಾಡುತ್ತಿದೆ. ಆದರೆ, ಜನಸಾಮಾನ್ಯರು ನನ್ನ ನಿರ್ಧಾರವನ್ನು ಬೆಂಬಲಿಸಿದರು ಎಂದೂ ಮೋದಿ ಹೇಳಿದ್ದಾರೆ.

ಮಾತಿಗೆ ಮರುಳಾಗದಿರಿ
“ವಾರಾಣಸಿಯಲ್ಲಿ ಮೋದಿ ಈಗಾಗಲೇ ಗೆದ್ದಾಗಿದೆ. ಹಾಗಾಗಿ ಮತ ಚಲಾಯಿಸದೇ ಇದ್ದರೂ ನಡೆಯುತ್ತದೆ’ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂಥವರ ಮಾತಿಗೆ ಮರುಳಾಗಿ, ಮತ ಚಲಾಯಿಸದೇ ಇರಬೇಡಿ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿ ಎಂದು ವಾರಾಣಸಿಯ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಅವರು, “ಮತದಾನ ಎನ್ನುವುದು ಎಲ್ಲರ ಹಕ್ಕು. ಅದನ್ನು ಎಲ್ಲರೂ ಚಲಾಯಿಸಲೇಬೇಕು’ ಎಂದಿದ್ದಾರೆ.

ಮೋದಿಯವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಮೋದಿ ಹತಾಶರಾಗಿದ್ದು, 3 ಹಂತಗಳ ಮತದಾನ ಮುಗಿದ ಬಳಿಕ ಅವರಲ್ಲಿ ಸೋಲಿನ ಭಯ ಕಾಡುತ್ತಿದೆ ಎನ್ನುವುದಕ್ಕೆ ಅವರ ಈ ಹೇಳಿಕೆಗಳೇ ಸಾಕ್ಷಿ’ ಎಂದಿದೆ. ಮೋದಿಯನ್ನು ಎಷ್ಟೇ ವೈಭವೀಕರಿಸಿದರೂ, ಸತ್ಯವನ್ನು ಮುಚ್ಚಿಡ ಲಾಗದು. ವಾರಾಣಸಿಯ ಜನತೆಗೆ ಇದು ಗೊತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಾಜೀವ್‌ ಶುಕ್ಲಾ ಹೇಳಿದ್ದಾರೆ.

Advertisement

ಆಡಳಿತ ಪರ ಅಲೆ ಇದೇ ಮೊದಲು
ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪರ ಅಲೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮುನ್ನ ಬಿಜೆಪಿಯ ಬೂತ್‌ ಮಟ್ಟದ ಕಾರ್ಯಕರ್ತರ ಜತೆ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಹಬ್ಬದ ವಾತಾವರಣ ಕಾಣುತ್ತಿದೆ. ನಿನ್ನೆಯ ರೋಡ್‌ಶೋ ವೇಳೆ ಪಕ್ಷದ ಕಾರ್ಯಕರ್ತರ ಪರಿಶ್ರಮವೆಷ್ಟಿದೆ ಎಂಬುದು ಅರ್ಥವಾಯಿತು. ಪಕ್ಷದ ಕಾರ್ಯಕರ್ತರೇ ನಿಜವಾದ ಅಭ್ಯರ್ಥಿಗಳು.

ನಾನು ಉತ್ತಮ ಆಡಳಿತ ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಜನ ಮೋದಿ ಸರಕಾರ ಮತ್ತೆ ಬರಬೇಕು ಎಂದು ಆಶಿಸುತ್ತಿದ್ದಾರೆ. ವಾರಾಣಸಿಯ ಫ‌ಲಿತಾಂಶವೇನೆಂದು ಎಲ್ಲರಿಗೂ ಗೊತ್ತು. ಆದರೆ, ನಾವು ಎಲ್ಲ ಮತದಾನದ ದಾಖಲೆಗಳನ್ನು ಸರಿಗಟ್ಟಬೇಕಿದೆ ಎಂದಿ ದ್ದಾರೆ. ಮತದಾನದ ದಿನದವರೆಗೂ ಪ್ರತಿಯೊಬ್ಬ ಕಾರ್ಯಕರ್ತನೂ ಕನಿಷ್ಠ 10 ಮತದಾರರನ್ನು ಭೇಟಿಯಾಗಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಚಲೋ ವಾರಾಣಸಿ ಎಂದ ಅನ್ನದಾತರು
ಗುರುವಾರ ಅತ್ತ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರು ಭರ್ಜರಿ ರೋಡ್‌ಶೋ ನಡೆಸುತ್ತಿದ್ದರೆ, ಇತ್ತ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಸುಮಾರು 50ರಷ್ಟು ಅನ್ನದಾತರು “ಚಲೋ ವಾರಾಣಸಿ’ ಎನ್ನುತ್ತಾ ಬಸ್‌ ಹತ್ತಿಯೇ ಬಿಟ್ಟಿದ್ದರು. ಅಂದ ಹಾಗೆ ಇವರು ಹೋಗುತ್ತಿರುವುದು ರ್ಯಾಲಿಗಳಲ್ಲಿ ಪಾಲ್ಗೊಳ್ಳಲು ಅಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಕಣಕ್ಕಿಳಿಯಲು! ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಾ ಬಂದಿರುವ ರೈತರು, ಬೇಡಿಕೆ ಈಡೇರಿಸದಿದ್ದರೆ ಪ್ರಧಾನಿ ವಿರುದ್ಧವೇ ಸ್ಪರ್ಧಿಸುತ್ತೇವೆ ಎಂದು ಘೋಷಿಸಿದ್ದರು. ಅದರಂತೆ 50 ರೈತರು ಈಗಾಗಲೇ ಬಸ್ಸನ್ನೇರಿದ್ದು, ನಾಮಪತ್ರ ಸಲ್ಲಿಕೆಗೆಂದು ವಾರಾಣಸಿಗೆ ತೆರಳಿದ್ದಾರೆ. ಏ.29 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಮೇ 19ರಂದು ಇಲ್ಲಿ ಮತದಾನ ನಡೆಯಲಿದೆ.

ತಾವು ಬೆಳೆಯುತ್ತಿರುವ ಅರಿಶಿನಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂದು ಕಳೆದ 5 ತಿಂಗಳಿಂದಲೂ ನಿಜಾಮಾಬಾದ್‌ನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.  ಇತ್ತೀಚೆಗಷ್ಟೇ ಇಲ್ಲಿನ ಎಲ್ಲ ರೈತರೂ ವಾರಾಣಸಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಾರೆ ಎಂದು ರೈತ ಸಂಘದ ಅಧ್ಯಕ್ಷರು ಘೋಷಿಸಿದ್ದರು. ಇದೇ ವೇಳೆ, ವಾರಾಣಸಿಗೆ ತೆರಳುತ್ತಿರುವ ರೈತರು ಟಿಆರ್‌ಎಸ್‌ ಪಕ್ಷದ ಕಾರ್ಯಕರ್ತರು ಎಂದು ತೆಲಂಗಾಣದ ಬಿಜೆಪಿ ನಾಯಕ ಅರವಿಂದ್‌ ಕುಮಾರ್‌ ಆರೋಪಿಸಿದ್ದಾರೆ. ಈಗಾಗಲೇ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕವಿತಾ ಅವರ ವಿರುದ್ಧ ಬರೋಬ್ಬರಿ 178 ರೈತರು ಕಣಕ್ಕಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next