ಸೈದಾಪುರ: ಕಾನೂನು ಪಾಲನೆ ಎಲ್ಲರ ಜವಾಬ್ದಾರಿಯಾದಾಗ ಮಾತ್ರ ಅಪರಾಧ ತಡೆಯಲು ಸಾಧ್ಯ. ಈ ದಿಸೆಯಲ್ಲಿ ಸಂಚಾರ ನಿಯಮ ಸೇರಿ ಪೊಲೀಸ್ ಇಲಾಖೆ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ನಿಯಮ ಪಾಲಿಸಲು ತಿಳಿಸಬೇಕಿದೆ ಎಂದು ಕಾನೂನು ಸುವ್ಯವಸ್ಥೆ ಪಿಎಸ್‌ಐ ಭೀಮರಾಯ ಬಂಕ್ಲಿ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸೈದಾಪುರ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದರು.
ಅಪರಿಚಿತರು ಕಂಡು ಬಂದರೆ ಅವರ ಚಲನವಲನ ಬಗ್ಗೆ ನಿಗಾ ವಹಿಸಬೇಕು. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಮಕ್ಕಳ ಅಪಹರಣ ಸೇರಿದಂತೆ ದರೋಡೆ ಪ್ರಕರಣ ತಡೆಗಟ್ಟಲು ಸಾಧ್ಯ. ವಿದ್ಯಾರ್ಥಿಗಳು ಸಂಚಾರ ನಿಯಮ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.
ಅಪರಾಧ ತಡೆ ಪಿಎಸ್‌ಐ ಹಣಮಂತ್ರಾಯ ದೊರೆ ಮಾತನಾಡಿ, ವಾಹನಗಳನ್ನು ನಿಗದಿತ ವೇಗದಲ್ಲಿ ಚಲಾಯಿಸಬೇಕು. ಈ ಕುರಿತು ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ವಾಹನಗಳಲ್ಲಿ ಸಂಚರಿಸುವಾಗ ಅದರ ಸುರಕ್ಷತೆ ಬಗ್ಗೆ ಗಮನ ವಹಿಸಿದರೆ ಅಪರಾಧ ತಡೆಯಲು ಸಾಧ್ಯ ಎಂದರು.
ಈ ವೇಳೆ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಶಿಕ್ಷಕರಾದ ಕಾಶಿನಾಥ ಶೇಖಸಿಂದಿ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ, ಸತೀಶ ಪುರ್ಮಾ, ತೋಟೇಂದ್ರ, ಕವಿತಾ ಸೇರಿದಂತೆ ಇತರರಿದ್ದರು.