ಮಂಡ್ಯ: “ಇತ್ತೀಚಿನ ದಿನಗಳಲ್ಲಿ ರೈತರು ಬ್ಯಾಂಕ್ ಸಾಲಗಳಿಗಿಂತ ಹೆಚ್ಚಾಗಿ ಖಾಸಗಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಖಾಸಗಿ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇರಳ ಮಾದರಿ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದೇನೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ಮಸೂದೆ ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸಂತೆಬಾಚಹಳ್ಳಿ ಹೋಬಳಿ ಕೆರೆಗಳ ಭರ್ತಿ ಮಾಡುವಂತೆ ಸೆಲ್ಫಿ ವಿಡಿಯೋ ಮೂಲಕ ಮನವಿ ಮಾಡಿದ್ದಲ್ಲದೆ, ತನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಸಿಎಂಗೆ ತಿಳಿಸಿ ಆತ್ಮಹತ್ಯೆಗೆ ಶರಣಾಗಿದ್ದ ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಿಎಂ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದ ವತಿಯಿಂದ ಕುಟುಂಬಕ್ಕೆ ಸ್ಥಳದಲ್ಲಿಯೆ 5 ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ವಿತರಿಸಿದರು.
ಮೃತ ಸುರೇಶ್ ಅವರ ಮಗ ಚಂದ್ರುಗೆ ಉದ್ಯೋಗ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜುಗೆ ತಾಕೀತು ಮಾಡಿದರು. ಮಗಳು ಸುವರ್ಣಾ ಅವರು ಎಂ.ಕಾಂ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ರೈತರ ಸಮಸ್ಯೆಗೆ ಸಾಲಮನ್ನಾ ಶಾಶ್ವತ ಪರಿಹಾರವಲ್ಲ. ರೈತರ ಸಮಸ್ಯೆಗೆಲ್ಲಾ ಆತ್ಮಹತ್ಯೆಯೇ ಅಂತಿಮ ಪರಿಹಾರವಲ್ಲ. ಆತ್ಮಹತ್ಯೆಗೆ ಮುನ್ನ ರೈತರು ಕುಟುಂಬದ ಬಗ್ಗೆ ಆಲೋಚಿಸಬೇಕು. ರೈತರ ಸಾಲವನ್ನು ಮನ್ನಾ ಮಾಡುವ ಭರವಸೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಬ್ಯಾಂಕುಗಳ ನೋಟಿಸ್‌ಗಾಗಲಿ, ಖಾಸಗಿ ಲೇವಿದಾರರ ಸಾಲಕ್ಕಾಗಲಿ ಹೆದರಿ ಆತ್ಮಹತ್ಯೆ ದಾರಿ ತುಳಿಯಬೇಡಿ ಎಂದು ರೈತರಿಗೆ ಮನವಿ ಮಾಡಿದರು.
ರಾಜ್ಯದ ರೈತರ ಕಣ್ಣೀರೊರೆಸಲು ನಾನು ಬದ್ದ. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯವನ್ನು ಮತ್ತೆ ಆರಂಭಿಸಿದ್ದೇನೆ. ಬಿಜೆಪಿಯವರು ಇದನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ನಾನು ಸ್ಟಾರ್ ಹೋಟೆಲ್‌ನಲ್ಲಿಯೂ ಮಲಗಿದ್ದೇನೆ. ಸಾಮಾನ್ಯ ಬಡವರ ಮನೆಯಲ್ಲಿಯೂ ಮಲಗಿದ್ದೇನೆ. ಬಿಜೆಪಿಯವರಿಂದ ರೈತರ ಬಗ್ಗೆ ಪಾಠ ಹೇಳಿಸಿಕೊಳ್ಳುವ ಪರಿಸ್ಥಿತಿ ಈ ನಿಮ್ಮ ಕುಮಾರಸ್ವಾಮಿಗೆ ಬಂದಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಸಿಎಂ