Advertisement

Consent Sex: ಸಮ್ಮತಿ ಸೆಕ್ಸ್‌- ವಯೋಮಿತಿ ಇಳಿಕೆಗೆ ಕಾನೂನು ಆಯೋಗ ಅ”ಸಮ್ಮತಿ”

09:54 PM Sep 29, 2023 | Team Udayavani |

ನವದೆಹಲಿ: “ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಲೈಂಗಿಕ ಕ್ರಿಯೆಯ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸುವ ಪ್ರಸ್ತಾಪವು ಒಪ್ಪತಕ್ಕದ್ದಲ್ಲ’ ಎಂದು ಕಾನೂನು ಆಯೋಗ ಹೇಳಿದೆ.
ವಯೋಮಿತಿ ಇಳಿಕೆಯು ಬಾಲ್ಯವಿವಾಹ ಮತ್ತು ಮಕ್ಕಳ ಕಳ್ಳಸಾಗಣೆ ವಿರುದ್ಧದ ಹೋರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದೂ ಆಯೋಗ ಅಭಿಪ್ರಾಯಪಟ್ಟಿದೆ.

Advertisement

22ನೇ ಕಾನೂನು ಆಯೋಗವು ಇತ್ತೀಚೆಗೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಸಲಹೆಯನ್ನು ನೀಡಿದೆ. ಪೋಕ್ಸೋ ಕಾಯ್ದೆಯಡಿ ಸಮ್ಮತಿ ಸೆಕ್ಸ್‌ನ ವಯೋಮಿತಿಗೆ ಸಂಬಂಧಿಸಿ ಎದ್ದಿರುವ ಕಳವಳಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸಂಸತ್‌ಗೆ ಮನವಿ ಮಾಡಿದ್ದರು.

ಅದರಂತೆ, ತನ್ನ ವರದಿ ಸಲ್ಲಿಸಿರುವ ಆಯೋಗ, “ಸಮ್ಮತಿ ಸೆಕ್ಸ್‌ನ ವಯೋಮಿತಿ ಇಳಿಕೆಯು ಸರಿಯಲ್ಲ. ಆದರೆ, 16ರಿಂದ 18ರೊಳಗಿನ ಮಕ್ಕಳು ಮೌನ ಸಮ್ಮತಿ ನೀಡಿದ್ದರೆ, ಅಂಥ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಂಗದ ವಿವೇಚನೆಗೆ ಬಿಡಬಹುದು. ಇಂತಹ ಸನ್ನಿವೇಶ ಎದುರಾದಾಗ ಏನು ಮಾಡಬಹುದು ಎಂಬ ಕುರಿತು ಕಾಯ್ದೆಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ’ ಎಂದೂ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಆಯೋಗ ಹೇಳಿದೆ.

ಸಲಿಂಗ ವಿವಾಹ ಪ್ರಸ್ತಾಪವಿಲ್ಲ:
ಸಮಾನ ನಾಗರಿಕ ಸಂಹಿತೆ(ಯುಸಿಸಿ)ಗೆ ಸಂಬಂಧಿಸಿದ ಕಾನೂನು ಆಯೋಗದ ವರದಿಯಲ್ಲಿ ಸಲಿಂಹ ವಿವಾಹವನ್ನು ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುಸಿಸಿ ಮಹಿಳೆ ಮತ್ತು ಪುರುಷನ ನಡುವಿನ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮತ್ತಿತರ ವಿಚಾರಗಳ ಕುರಿತಾಗಿರುತ್ತದೆ. ಸಲಿಂಗ ವಿವಾಹವು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದೂ ಹೇಳಲಾಗಿದೆ.

ಇ-ಎಫ್ಐಆರ್‌:
ಆರೋಪಿ ಯಾರೆಂದು ತಿಳಿದಿರದಂಥ ಎಲ್ಲ ಪ್ರಕರಣಗಳಲ್ಲೂ ಆನ್‌ಲೈನ್‌ ಮೂಲಕ ಎಫ್ಐಆರ್‌ ದಾಖಲಿಸಲು ಅವಕಾಶ ಸಿಗಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ. ಆರೋಪಿಯು ಯಾರೆಂದು ತಿಳಿದಿದ್ದಾಗ, 3 ವರ್ಷಗಳವರೆಗೆ ಶಿಕ್ಷೆಯಿರುವಂಥ ಅಪರಾಧ ಪ್ರಕರಣಗಳಲ್ಲಿ ಮಾತ್ರ ಇ-ಎಫ್ಐಆರ್‌ ದಾಖಲಿಸಲು ಅವಕಾಶ ನೀಡಬೇಕು. ಹಂತ ಹಂತವಾಗಿ ಈ ಪ್ರಕ್ರಿಯೆ ಜಾರಿಯಾಗಬೇಕು ಎಂದೂ ಆಯೋಗದ ಶಿಫಾರಸಿನಲ್ಲಿ ಉಲ್ಲೇಖೀಸಲಾಗಿದೆ. ಸುಳ್ಳು ಎಫ್ಐಆರ್‌ ದಾಖಲಾಗುವುದನ್ನು ತಡೆಯಲು ದೂರುದಾರನ ಮೊಬೈಲ್‌ ಸಂಖ್ಯೆಯನ್ನು ಒಟಿಪಿ ಮೂಲಕ ದೃಢೀಕರಿಸುವ, ಆಧಾರ್‌ ಸೇರಿದಂತೆ ಗುರುತಿನ ಚೀಟಿಗಳನ್ನು ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಯನ್ನು ನಡೆಸಬೇಕು ಎಂದೂ ಆಯೋಗ ಹೇಳಿದೆ.

Advertisement

ಒಂದು ದೇಶ, ಒಂದು ಚುನಾವಣೆ 2029ಕ್ಕೆ ಜಾರಿ?
2024ರ ಲೋಕಸಭೆ ಚುನಾವಣೆ ವೇಳೆಗೆ “ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಮುಂದಿನ ವರ್ಷ ಏಕಕಾಲದಲ್ಲಿ ಚುನಾವಣೆ ನಡೆಯುವುದಿಲ್ಲ ಎಂದು ಕಾನೂನು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಎಲ್ಲ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ಮೂಲಕ ಅಸೆಂಬ್ಲಿ ಚುನಾವಣೆಗಳೆಲ್ಲವನ್ನೂ 2029ರ ಲೋಕಸಭೆ ಚುನಾವಣೆಯೊಂದಿಗೆ ನಡೆಸಲು ನಾವು ಒಂದು ಸೂತ್ರವನ್ನು ಸಿದ್ಧಪಡಿಸುತ್ತಿದ್ದೇವೆ ಎಂದೂ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಏಕಕಾಲದ ಚುನಾವಣೆಗೆ ಸಂಬಂಧಿಸಿದ ಕಾನೂನು ಆಯೋಗದ ವರದಿಯು 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನಕ್ಕೆ ತರಬೇಕಾದ ತಿದ್ದುಪಡಿ ಕುರಿತು ವರದಿಯಲ್ಲಿ ಶಿಫಾರಸು ಮಾಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next