ಸುರಪುರ: ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಮಕ್ಕಳ ಹಕ್ಕು ಅತ್ಯಂತ ಪ್ರಮುಖವಾಗಿದೆ. ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆಯುವುದು ಪ್ರತಿಯೊಬ್ಬ ಮಗುವಿನ ಹಕ್ಕು, ಇದನ್ನು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಾರುತಿ ಕೆ. ಅಭಿಪ್ರಾಯಪಟ್ಟರು.
ತಾಲೂಕಿನ ದೇವಿಕೇರಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ತಾಲೂಕು ಆಡಳಿತದ ಆಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕು ರಕ್ಷಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಗೆ ಹೋಗಿ ಶಾಲಾ ಅಂಗಳದಲ್ಲಿ ಆಡುತ್ತ, ನಲಿಯುತ್ತ ಅಕ್ಷರ ಕಲಿಯಬೇಕಿರುವ ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ತಪ್ಪು. ಇದಲ್ಲದೇ ಹೊಲ, ಮನೆ ಕೆಲಸಗಳಿಗೆ ಕರೆದುಕೊಂಡು ಹೋಗುವುದು ಕೂಡ ಅಪರಾಧ. ಇದು ಮಕ್ಕಳ ಹಕ್ಕು ಉಲ್ಲಂಘನೆ ಆರೋಪದಡಿ ಶಿಕ್ಷಾರ್ಹ ಅಪರಾಧವಾಗಿದೆ. ಸರಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದಿದೆ ಆದ್ದರಿಂದ ಪಾಲಕ, ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಂದಣ್ಣ ಬಾಕ್ಲಿ ಮಾತನಾಡಿ, ಇತ್ತೀಚೆಗೆ ಮಕ್ಕಳನ್ನು ಹೊಲ, ಗದ್ದೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಕಂಡು ಬರುತ್ತಿದೆ. ಇದು ತಪ್ಪು, ಮಕ್ಕಳನ್ನು ಮೊದಲು ಶಾಲೆಗೆ ಕಳುಹಿಸಿ, ಉನ್ನತ ಶಿಕ್ಷಣ ಕೊಡಿಸಿ ದೊಡ್ಡ ದೊಡ್ಡ ಅ ಧಿಕಾರಿಗಳನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ವಕೀಲರಾದ ಚನ್ನಪ್ಪ ಹೂಗಾರ, ಗೋಪಾಲ ತಳವಾರ ಮಕ್ಕಳ ಹಕ್ಕು ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ ಹುದ್ದಾರ, ಪಿಡಿಒ ಸಂಗೀತಾ ಸಜ್ಜನ್, ಶಾಲಾ ಪ್ರಧಾನ ಗುರು ತಿಪೇಸ್ವಾಮಿ ಇದ್ದರು, ಶಿಕ್ಷಕ ಶಿವಶರಣಯ್ಯ ನಿರೂಪಿಸಿದರು. ಗಿರೀಶ ವಂದಿಸಿದರು.