ಬೆಂಗಳೂರು: ರಾಜ್ಯದಲ್ಲಿ ಸಹಜ ಪರಿಸ್ಥಿತಿಯಿದ್ದು, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಲಭೆಯಿಂದಾಗಿ ಮಂಗಳೂರಿನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಅದನ್ನು ಈಗ ಸಡಿಲಿಸಿದ್ದೇವೆ. ಮಂಗಳೂರು ಸಂಪೂರ್ಣ ಶಾಂತವಾಗಿದೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಪರಿಸ್ಥಿತಿ ಸಹಜಸ್ಥಿತಿಯಲ್ಲಿದ್ದು, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಮಂಗಳೂರಿನಲ್ಲಿ ಗಲಭೆ ಸಂದರ್ಭದಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ತಲಾ 10 ಲ.ರೂ. ಘೋಷಣೆ ಮಾಡಿದ್ದಾರೆ ಎಂದರು.
ಮಂಗಳೂರು ಗಲಭೆಗೂ ಮುನ್ನ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಯಾವ ಸ್ವರೂಪದ ತನಿಖೆ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಜನವರಿಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂಬ ವರದಿಯ ಬಗ್ಗೆ ಕಿಡಿಕಾರಿದ ಅವರು, ಇದೆಲ್ಲವೂ ಊಹಾಪೋಹ, ಈ ಸಂಬಂಧ ಕೇಂದ್ರದಿಂದ ಯಾವುದೇ ಸೂಚನೆ ಇನ್ನು ಬಂದಿಲ್ಲ. ಹೀಗಿದ್ದರೂ ರಾಜ್ಯದಲ್ಲಿ ಜನವರಿಯಿಂದ ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳುವುದು ಸರಿಯಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿ ವಿಚಾರದಲ್ಲಿ ಕೆಲವರು ತಮ್ಮದೆ ಆದ ಗೊಂದಲ ಸೃಷ್ಟಿಸಿ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.