ಉಳ್ಳಾಲ: ಪ್ರದಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಬೋಳಿಯಾರಿನಲ್ಲಿ ಭಾರತ ಮಾತೆಗೆ ಜೈಕಾರ ಘೋಷಣೆ ಹಾಕಿ ಸಂಭ್ರಮಾಚರಣೆ ನಡೆಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಮಾರಕಾಯುಧಗಳಿಂದ ಇರಿದು ಹಲ್ಲೆ ನಡೆಸಿರುವುದು ಪೂರ್ವ ಯೋಜಿತ ಕೃತ್ಯವಾಗಿದ್ದು, ಈ ಕೃತ್ಯದ ಹಿಂದೆ ಕಾಂಗ್ರೆಸ್ ನಾಯಕರ ಕುಮ್ಮಕ್ಕು ಇದ್ದು, ಪೊಲೀಸ್ ಇಲಾಖೆ ಪೂರ್ಣ ಪ್ರಮಾಣದ ತನಿಖೆ ನಡೆಸಿ ಈ ಕೃತ್ಯದ ಹಿಂದಿರುವವರನ್ನು ಬಂಧಿಸಬೇಕು ಮತ್ತು ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.
ಅವರು ಬೋಳಿಯಾರ್ ವಿಜಯೋತ್ಸವ ಸಂದರ್ಭದಲ್ಲಿ ಚೂರಿ ಇರಿತದಿಂದ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರಾದ ಹರೀಶ್ ಧರ್ಮನಗರ ಮತ್ತು ನಂದನ್ ಕುಮಾರ್ ಅವರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಬೋಳಿಯಾರಿನಲ್ಲಿ ಭಾರತ ಮಾತೆಗೆ ಜೈಕಾರ ಹಾಕಿದ ಕಾರ್ಯಕರ್ತರ ಮೇಲೆ ಜೆಹಾದಿ ಮನಸ್ಥಿತಿಯ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಕಳವಳಕಾರಿಯಾಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಫೂರ್ಣ ಹದಗೆಟ್ಟಿದೆ. ಕಳೆದ ಒಂದು ತಿಂಗಳಿನಿಂದ ಬಿಜೆಪಿ ಕಾರ್ಯಕರ್ತರ ಮನೊಸ್ಥೈರ್ಯವನ್ನು ಕುಗ್ಗಿಸುವಂತಹ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸುತ್ತಿದೆ ಎಂದು ಹೇಳಿದರು.
ಭಾರತ ಮಾತೆಗೆ ಜೈಕಾರ ಹಾಕಿದ ಕಾರ್ಯಕರ್ತರ ವಿರುದ್ಧವೂ ಪೊಲೀಸರು ಕೇಸು ದಾಖಲಿಸುವ ಮಟ್ಟಕ್ಕೆ ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಬಂದು ನಿಂತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ರಾಜಕೀಯ ಪುಡಾರಿಗಳ ಮಾತಿಗೆ ಬಲಿಯಾಗಿ ತನಿಖೆ ನಡೆಸಿದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲಾಗುವುದು. ಘಟನೆಗೆ ಸಂಬಂಧಿಸಿದಂತೆ ವೀಡಿಯೊ ಫೂಟೆಜ್‍ನ ಆಧಾರದಲ್ಲಿ ಎಲ್ಲರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.