Advertisement

ಪುಟಾಣಿಗಳ ಹೆಜ್ಜೆಯಲ್ಲಿ ಲವ-ಕುಶ

06:28 PM Oct 10, 2019 | mahesh |

ಯಕ್ಷದೇಗುಲ ಸಂಸ್ಥೆಯ ಮಕ್ಕಳ ತಂಡದವರಿಂದ ಅಪರೂಪದ ಲವ-ಕುಶ ಕಾಳಗ ಯಕ್ಷಗಾನ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರಿನ ಯುವಶಕ್ತಿ ಗೆಳೆಯರ ಸಂಘದವರ ಆಶ್ರಯದಲ್ಲಿ ನಡೆಯಿತು. ಇಡೀ ರಾತ್ರಿ ಪ್ರದರ್ಶನವಾಗುತ್ತಿದ್ದ ಪ್ರದರ್ಶನವನ್ನು ಕಾಲಮಿತಿಗೊಳಪಡಿಸಿದಾಗ 25 ವಾಕ್ಯದ ಮಾತನ್ನು 4 ಮಾತಿನಲ್ಲಿ ಮನ ಮುಟ್ಟುವ ಹಾಗೆ ಪ್ರೇಕ್ಷಕರಿಗೆ ತಲುಪಿಸಬೇಕಾಗುತ್ತದೆ. ಅತಿಯಾದ ನೃತ್ಯ, ಅಭಿನಯ ಇಂದಿನ ಪ್ರೇಕ್ಷಕರಿಗೆ ಅವಶ್ಯಕತೆಯಿಲ್ಲ ಎಂಬುದಕ್ಕೆ ಲವ-ಕುಶ ಕಾಳಗದ ಪ್ರದರ್ಶನ ಸಾಕ್ಷಿ. ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಲವ-ಕುಶ (ಪಟ್ಟದ ಸಂಧಿ)ಪ್ರಸಂಗದಲ್ಲಿ ಭಾವಾಭಿವ್ಯಕ್ತಿಯೇ ಪ್ರಧಾನವಾಗಿದ್ದು ಪ್ರಸಂಗದ ಬಾಲ ಕಲಾವಿದರೆಲ್ಲಾ ಆ ಕಡೆಗೆ ಒತ್ತು ಕೊಟ್ಟಿದ್ದು ಮೆಚ್ಚುಗೆಯ ಅಂಶ.

Advertisement

ಲವ-ಕುಶರ ಪಾತ್ರದಲ್ಲಿ ಮೊದಲು ಶ್ರೀನಿಧಿ, ಪ್ರಣಮ್ಯಾ ನಂತರದ ಲವ-ಕುಶರಾಗಿ ಶ್ರೀವತ್ಸ, ಶ್ರೇಯಾ ಅವರ ಚೂರುಕಿನ ನೃತ್ಯ, ಇತಿ, ಮಿತಿ ಸಂಭಾಷಣೆ ಅಮೋಘವಾಗಿತ್ತು. ನಂತರ ಘೋರ ಶೂರ್ಪನಕಿಯಾಗಿ ಶ್ರೀವಿದ್ಯಾ ಹೆಣ್ಣು ಬಣ್ಣದ ತಟ್ಟಿ ಕಟ್ಟಿಕೊಂಡು, ಬಣ್ಣದ ವೇಷಕ್ಕೆ ಬೇಕಾದ ಗಟ್ಟಿ ಸ್ವರದಿಂದ ಬಡುಗುತಿಟ್ಟಿನ ಶ್ರೀಮಂತಿಕೆಯನ್ನು ಸಾದರಪಡಿಸಿದರು. ಮಾಯಾ ಶೂರ್ಪನಕಿಯಾಗಿ ಚೈತ್ರಾ ಅವರ ಸುಂದರ ರೂಪ ಲಾವಣ್ಯ, ನೃತ್ಯ ನಯನ ಮನೋಹರವಾಗಿತ್ತು. ಸೀತೆಯಾಗಿ ಪರಿಮಿಕ, ವಾಲ್ಮೀಕಿಯಾಗಿ ಶ್ರೀರಾಮ್‌ ಗಮನ ಸೆಳೆದರು. ವಿಭೀಷಣನ ಒಡ್ಡೋಲಗ ಸಂಪ್ರದಾಯ ಬದ್ಧವಾಗಿತ್ತು. ಕಟ್ಟು ಮೀಸೆಯೊಂದಿಗೆ ಕೆಂಪು ಮುಂಡಾಸು ಧರಿಸಿ ಶ್ರೀರಾಮ ಹೆಬ್ಟಾರ್‌ ತನ್ನ ಛಾಪನ್ನು ಒತ್ತಿದರು. ವಿಭೀಷಣನ ಪಡೆಯ ವೇಷಗಳನ್ನು ಆದರ್ಶ ಮತ್ತು ಅಕ್ಷಯ್‌ ನಿರ್ವಹಿಸಿದರು. ಯುದ್ಧದ ಸನ್ನಿವೇಶ, ವನಪ್ರದೇಶ ಮುಂತಾದ ರಸ ಘಟ್ಟಗಳನ್ನು ಯಕ್ಷದೇಗುಲದ ಮಕ್ಕಳು ಸಮರ್ಪಕವಾಗಿ ಪ್ರದರ್ಶಿಸಿದರು. 2 ಗಂಟೆಯ ಪ್ರಸಂಗದ ಪ್ರದರ್ಶನವನ್ನು ಪ್ರಿಯಾಂಕ ಕೆ. ಮೋಹನ್‌ ನಿರ್ದೇಶನದಲ್ಲಿ ಮಕ್ಕಳು ಶುದ್ಧ ಕನ್ನಡದಲ್ಲಿ ಚೊಕ್ಕವಾಗಿ ತೋರಿಸಿಕೊಟ್ಟಿದ್ದಾರೆ. ಪ್ರದರ್ಶನದ ಮೊದಲಿಗೆ ಯಕ್ಷಗಾನದ ಸಭಾಲಕ್ಷಣದ ಕೋಡಂಗಿ ವೇಷಗಳನ್ನು ಮೇಘನಾ ಹಾಗೂ ಚಿನ್ಮಯ್‌ ಶುದ್ಧವಾಗಿ ಪ್ರದರ್ಶಿಸಿದರು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಗಣಪತಿ ಭಟ್‌ ಯಲ್ಲಾಪುರ, ಚಂಡೆಯಲ್ಲಿ ಮಂಜುನಾಥ ನಾವುಡ ಸಹಕರಿಸಿದರು.

– ಕೋಟ ಸುದರ್ಶನ ಉರಾಳ

Advertisement

Udayavani is now on Telegram. Click here to join our channel and stay updated with the latest news.

Next