ಮೊನಾಕೊ: ವಿಶ್ವ ವಿಖ್ಯಾತ ಟೆನಿಸ್ ತಾರೆ ಸರ್ಬಿಯಾದ ನೊವಾಕ್ ಜೊಕೊವಿಚ್ ಲಾರೆಸ್ ವಿಶ್ವ ನ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕೊಡಮಾಡುವ “ಲಾರೆಸ್ ವರ್ಷದ ವಿಶ್ವ ಕ್ರೀಡಾ ಸಾಧಕ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಜಿಮ್ನಾಸ್ಟಿಕ್ ತಾರೆ ಸಿಮೋನೆ ಬೈಲ್ಸ್ “ಲಾರೆಸ್ ವರ್ಷದ ಕ್ರೀಡಾ ಸಾಧಕಿ’ ಗೌರವಕ್ಕೆ
ಪಾತ್ರರಾಗಿದ್ದಾರೆ.
ವಿಶ್ವದ ಕ್ರೀಡಾ ತಾರೆಯರಾದ ಕಿಲಿಯಾನ್ ಎಂಬಾಪೆ, ಕಿಪ್‌ಚೊಂಗ್ ಮತ್ತು ಲಿಬ್ರಾನ್ ಜೇಮ್ಸ್ ಅವರಿಂದ ಕಠಿಣ ಹೋರಾಟ ಎದುರಿಸಿದರೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಸಫಲರಾದರು. ಜೋಕೊ ನಾಲ್ಕನೇ ಬಾರಿಗೆ ಲಾರೆಸ್ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ. ಈ ಮೂಲಕ ಖ್ಯಾತ ಓಟಗಾರ ಉಸೇನ್ ಬೋಲ್ಟ್ ಜತೆಗೆ ಸಮಸಾಧಿಸಿದ್ದಾರೆ. ಬೋಲ್ಟ್ ಕೂಡ ನಾಲ್ಕು ಸಲ ಲಾರೆಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಟೆನಿಸಿಗ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ 5 ಬಾರಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಕ್ರೀಡಾಪಟು. ಜೊಕೊ ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಒಟ್ಟಾರೆ ಮೂರು ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಪ್ರಶಸ್ತಿ ಗೆಲುವಿನ ಸಂತಸದಲ್ಲಿ ಮಾತನಾಡಿದ ಅವರು “ಕಳೆದ ವರ್ಷ ಗಾಯದಿಂದ ಚೇತರಿಸಿಕೊಂಡು ಟೆನಿಸಿಗ ಅಂಗಳಕ್ಕೆ ಇಳಿದ ನಾನು ವಿಂಬಲ್ಡನ್ ಹಾಗೂ ಯುಎಸ್ ಓಪನ್ ಟೆನಿಸ್ ಕೂಟವನ್ನು ಗೆದ್ದಿದ್ದೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ತಿಳಿಸಿದರು.
ಬೈಲ್ಸ್ 2ನೇ ಗರಿ: ಜಿಮ್ನಾಸ್ಟಿಕ್ ತಾರೆ ಅಮೆರಿಕದ ಸಿಮೋನೆ ಬೈಲ್ಸ್ “ಲಾರೆಸ್ ವರ್ಷದ ಕ್ರೀಡಾ ಸಾಧಕಿ’ ಗೌರವಕ್ಕೆ ಎರಡನೇ ಸಲ ಪಾತ್ರರಾಗುತ್ತಿದ್ದಾರೆ. ಅವರು ಹಲವು ವರ್ಷಗಳಿಂದ ವಿಶ್ವ ಜಿಮ್ನಾಸ್ಟಿಕ್‌ನಲ್ಲಿ ಗಣನೀಯ ಪ್ರದರ್ಶನ ನೀಡಿದ್ದರು. 14 ಬಾರಿ ವಿಶ್ವ ಪದಕ ಗೆದ್ದಿರುವ ಸಾಧನೆ ಮಾಡಿದ್ದಾರೆ.ಒಲಿಂಪಿಕ್ಸ್ ನಲ್ಲೂ ಪದಕ ಗೆದ್ದು ಗಮನ ಸೆಳೆದಿದ್ದಾರೆ. 2017ರಲ್ಲಿ ಮೊದಲ ಸಲ “ಲಾರೆಸ್ ವರ್ಷದ ಕ್ರೀಡಾ ಸಾಧಕಿ’ ಪ್ರಶಸ್ತಿ ಪಡೆದಿದ್ದರು.