ಕಲಿಕೆ ಹಾಗೂ ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಎಷ್ಟೋ ಮಂದಿ ತೋರಿಸಿಕೊಟ್ಟಿದ್ದಾರೆ. ಕಲಿಯುವ ಆಸಕ್ತಿ ಮತ್ತು ಸಾಧಿಸುವ ತುಡಿತ ಇದ್ರೆ ಅದಕ್ಕೆ ವಯಸ್ಸು ದಾಟಿದ ವ್ಯಕ್ತಿಯೂ ಸಾರಿಸಾಟಿ, ಪ್ರೈಮರಿ ಶಾಲೆಯ ಮಕ್ಕಳೂ ಸರಿಸಾಟಿ. ಶಿಕ್ಷಣವನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ಪೂರ್ತಿ ಮಾಡಿಕೊಳ್ಳಬಹದು ಎನ್ನುವುದಕ್ಕೆ ಈ ಬಾಲಕ ಸಾಕ್ಷಿಯಾಗಿದ್ದಾನೆ. ನಾವೆಲ್ಲಾ ವಿಡಿಯೋ ಗೇಮ್, ಆಟದಲ್ಲಿ ನಿರತವಾಗಿರುವ ವಯಸ್ಸಿನಲ್ಲಿ, ಶಾಲೆಯ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸಿಲ್ಲ. ಆದರೆ, ಇಲ್ಲೊಬ್ಬ 11ರ ಪೋರನೊಬ್ಬನ ಸಾಧನೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಕಲಿಕೆ ಹಾಗೂ ಸಾಧನೆಗೆ ಈತ ಪ್ರೇರಣೆಯಾಗಬಲ್ಲ.
ಇದು ವಿದೇಶಿ ಹುಡುಗನೊಬ್ಬನ ಸಾಧನೆಯ ಕಥೆ. ಬೆಲ್ಜಿಯಂ ಒಸ್ಟಂಡ್ ನ ನಿವಾಸಿ ಸಿಮೋನ್ಸ್. ಈತನಿಗೆ ಈಗ ಕೇವಲ 11 ರ ವಯಸ್ಸು. ನೀವಂದುಕೊಂಡಂತೆ ಈತ ಪ್ರೈಮರಿ ಶಾಲೆಯಲ್ಲಿ ಕಲಿತ ಹುಡುಗನಿರಬಹುದು. ಆದರೆ ಈತ ಸಾಧಿಸಿರುವ ಸಾಹಸ. ದೊಡ್ಡವರಾದ ನಮಗೂ ಕೂಡ ಅಷ್ಟು ಸುಲಭಕ್ಕೆ ಸಾಧ್ಯವಾಗಲ್ಲ.
ಸಿಮೋನ್ಸ್ ವಿಶ್ವದ 2 ನೇ ಅತೀ ಪುಟ್ಟ ಪದವೀಧರ ಎನ್ನುವ ದೊಡ್ಡ ಸಾಧನೆಯೊಂದನ್ನು ಮಾಡಿ, ಸಂಚಲನ ಸೃಷ್ಟಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈತನ ಈ ಸಾಧನೆ ತಿಳಿದು ಜನ ಮೆಚ್ಚುಗೆಯ ಜೊತಗೆ ಅಚ್ಚರಿಯನ್ನು ತೋರ್ಪಡಿಸುತ್ತಿದ್ದಾರೆ.
ಬೆಲ್ಜಿಯಂನ ಆಂಟ್ವರ್ಪ್ ಎಂಬ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಈತ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾನೆ. ಸಾಮಾನ್ಯವಾಗಿ ಡಿಗ್ರಿ ಮುಗಿಸಲು 20 ವರ್ಷ ವಯಸ್ಸಾಗಿರುತ್ತದೆ. ಹಂತ ಹಂತ ದಾಟಿ ಮೂರು ವರ್ಷ ಡಿಗ್ರಿ ಪಾಠಗಳನ್ನು ಕಲಿತು ಪರೀಕ್ಷೆ ಬರೆದಾಗ 20 ಅಥವಾ 21 ವರ್ಷ ವಯಸ್ಸು ಆಗಿರುತ್ತದೆ. ಆದರೆ ಲೌರೆಂಟ್ ಸಿಮೋನ್ಸ್ ಮೂರು ವರ್ಷದ ಡಿಗ್ರಿಯನ್ನು ಕೇವಲ ಒಂದೇ ವರ್ಷದಲ್ಲಿ ಮುಗಿಸಿ ದಾಖಲೆ ಬರೆದಿದ್ದಾನೆ.
ಸಿಮೋನ್ಸ್ ಬಾಲ್ಯದಿಂದಲೇ ಚುರುಕು ಬುದ್ಧಿಯ ಹುಡುಗ. ಆತನಿಗೆ ಕುತೂಹಲ ಹೆಚ್ಚು. ಸದಾ ಸಂಶೋಧನೆಯ ಯೋಚನೆಯಲ್ಲಿ ಮಗ್ನನಾಗಿರುತ್ತಿದ್ದ. ಒಂದೂವರೆ ವರ್ಷದಲ್ಲಿ ಹೈಸ್ಕೂಲ್ ಡಿಪ್ಲೋಮಾವನ್ನು ಪೂರ್ತಿಗೊಳಿಸಿದಾಗ ಆತನಿಗೆ ಬರೀ 8 ವರ್ಷ. ಬಳಿಕ ನಿಧಾನವಾಗಿ ಆತನಿಗೆ ಬೌತಶಾಸ್ತ್ರದ ಆಸಕ್ತಿದಾಯಕ ವಿಚಾರಗಳು ಗಮನ ಸೆಳೆದವು ಅದರಲ್ಲೇ ತಲ್ಲೀನನಾದ ಸಿಮೋನ್ಸ್, ಅದನ್ನೇ ಕರಗತ ಮಾಡಿಕೊಂಡು, ಪದವಿಯಂಥ ಹಂತವನ್ನು 11 ಹರೆಯದಲ್ಲಿ ಪೂರ್ತಿಗೊಳಿಸಿ ಸಾಧನೆಗೈದಿದ್ದಾನೆ. ಸಿಮೋನ್ಸ್ ಶೇ.85 ರಷ್ಟು ಅಂಕಗಳಿಸಿ, ಫಸ್ಟ್ ರ್ಯಾಕ್ ಗಳಸಿದ್ದಾನೆ. ಮುಂದೆ ಬೌತಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಮಾಡುವ ಉದ್ದೇಶ ಹೊಂದಿದ್ದಾನೆ ಸಿಮೋನ್ಸ್.
ಈ ಬಗ್ಗೆ ಹೇಳುವ ಸಿಮೋನ್ಸ್ ನನಗೆ ವಯಸ್ಸಿನ ಬಗ್ಗೆ ಚಿಂತೆಯಿಲ್ಲ. ನನ್ನ ಉದ್ದೇಶ ಜ್ಞಾನವನ್ನು ಪಡೆದುಕೊಳ್ಳುವುದು ಮಾತ್ರ ಎನ್ನುತ್ತಾನೆ. 1994ರಲ್ಲಿ ಮೈಕಲ್ ಕೀರ್ನಿ ಎಂಬವ 10 ವರ್ಷದವನಿದ್ದಾಗಲೇ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್ ಮರಿಯಬಹುದಿತ್ತು. ಆದರೆ 2019ರಲ್ಲಿ ನೆದರ್‍ಲೆಂಡ್‍ನ ಐಂಡ್‍ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್ ಗೆ 10 ವರ್ಷ ವಯಸ್ಸಾಗದ ಹೊರತ ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಮೋನ್ಸ್ ಚರ್ಚೆಯಲ್ಲಿದ್ದಾನೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹುಡುಗ ಮುಂದಿನ ದಿನಗಳಲ್ಲಿ ಅದ್ಯಾವೆಲ್ಲಾ ಸಾಹಸಕ್ಕೆ ಕೈಹಾಕುತ್ತಾನೆ ಎನ್ನವುದರ ಕುರಿತು ಚರ್ಚೆಗಳು ನಡೆದಿವೆ. ಸಿಮೋನ್ಸ್ ಮನೆಯವರ ಪೂರ್ತಿ ಸಹಕಾರ, ಸಲಹೆ, ಪ್ರೋತ್ಸಾಹವೇ ಈ ಸಾಧನೆಗೆ ಅಡಿಪಾಯವೆಂದರೆ ತಪ್ಪಾಗದು.
*ಸುಹಾನ್ ಶೇಕ್