Advertisement
ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ (ಎನ್‌ಐಎಎನ್‌ಪಿ) ಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿ ಅತುಲ್ ಚತುರ್ವೇದಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಭಾರತದಲ್ಲಿ ಒನ್ ಹೆಲ್ತ್ ಯೋಜನೆ ಅನುಷ್ಠಾನದಿಂದ ಜಾನುವಾರು, ಮಾನವ, ವನ್ಯಜೀವಿಗಳ ಆರೋಗ್ಯ ಮತ್ತು ಪರಿಸರ ಸ್ವಾಸ್ಥ್ಯವನ್ನು ಕಾಪಾಡುವ ಮತ್ತು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಈ ಯೋಜನೆಯು ರಾಷ್ಟ್ರಮಟ್ಟದ ಒನ್ ಹೆಲ್ತ್ ಯೋಜನೆ ಜಾರಿಗೆ ಭವವಿಷ್ಯದಲ್ಲಿ ಬುನಾದಿಯಾಗಲಿದೆ ಎಂದರು.
ಉತ್ತರಾಖಂಡ್ ಹಾಗೂ ಕರ್ನಾಟಕದಲ್ಲಿ ಈ ಯೋಜನೆಯನ್ನು ಎರಡು ವರ್ಷದ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಸಾಧಕ-ಬಾಧಕಗಳನ್ನು ಆಧರಿಸಿ ಇದನ್ನು ದೇಶವ್ಯಾಪಿ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಯೋಜನೆ ಜಾರಿಗೆ ಕೇಂದ್ರ ಸರಕಾರ ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆಯು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಹಾಗೂ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಜತೆಗೆ ಒಡಂಬಡಿಕೆ ಮಾಡಿಕೊಂಡಿವೆ. ರಾಜ್ಯದ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.