ಮೈಸೂರು: ದಸರಾ ಮಹೋತ್ಸವ ನಾಡ ಕುಸ್ತಿ ಪಂದ್ಯಾವಳಿಗೆ ಪೈಲ್ವಾನರ ಜೋಡಿ ಕಟ್ಟುವ ಕಾರ್ಯಕ್ಕೆ ಭಾನುವಾರ ಚಾಲನೆ ದೊರೆಯಿತು. ನಗರದ ವಸ್ತು ಪ್ರದರ್ಶನ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಮಂದಿರದಲ್ಲಿ ಜೋಡಿ ಕಟ್ಟುವ ಕಾರ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 400ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು. ಮೊದಲ ದಿನವಾದ ಭಾನುವಾರ ವಯೋಮಿತಿ ಮತ್ತು ತೂಕದ ಆಧಾರದ ಮೇಲೆ 120 ಜೋಡಿ ಪೈಲ್ವಾನರ ಜೋಡಿ ಕಟ್ಟಲಾಯಿತು.
ಬೆಂಗಳೂರು, ಕನಕಪುರ, ನಂಜನಗೂಡು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು ಗರಡಿಗಳಿಂದ ಪೈಲ್ವಾನರು ಭಾಗವಹಿಸಿದ್ದರು. ಇನ್ನೆರೆಡು ದಿನಗಳಲ್ಲಿ ಜೋಡಿ ಕಟ್ಟುವ ಕಾರ್ಯ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಸುಮಾರು 200 ಜೋಡಿಗಳು ನಾಡಕುಸ್ತಿಯಲ್ಲಿ ಭಾಗವಹಿಸಲಿವೆ. ಉದ್ಘಾಟನೆ ಸಮಾರಂಭಕ್ಕೆ ಉತ್ತಮ 25 ಜೋಡಿಗಳನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ ಎಂದು ಸಂಘಟಕರು ತಿಳಿಸಿದರು.
ನವರಾತ್ರಿಯ ಮೊದಲ ದಿನವಾದ ಸೆ. 29 ರಂದು ವಸ್ತು ಪ್ರದರ್ಶನ ಆವರಣದ ದೇವರಾಜ ಅರಸು ಕುಸ್ತಿ ಅಖಾಡದಲ್ಲಿ ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಅ.4ರಂದು ಮುಗಿಯಲಿದೆ. ಪ್ರತಿ ದಿನ ಮಧ್ಯಾಹ್ನ 3 ಗಂಟೆಯಿಂದ ಪಂದ್ಯಗಳು ಆರಂಭವಾಗಲಿದ್ದು, 20 ರಿಂದ 25 ನಾಡ ಕುಸ್ತಿಗಳು ಹಾಗೂ 1 ದೊಡ್ಡ ಕುಸ್ತಿ ನಡೆಯಲಿದೆ. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ದಂಡ ಹಿಡಿದು ತಿರುಗಿಸಿ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿ, ದಸರಾ ಮೂಲಕ ಪೈಲ್ವಾನರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಪೈಲ್ವಾನ್ ಪ್ರೊ.ರಂಗಯ್ಯ ಮಾತನಾಡಿ, ದಸರಾದಲ್ಲಿ ಉಳಿದ ಕಾರ್ಯಕ್ರಮಗಳಿಗಿಂತ ನಾಡಕುಸ್ತಿ ಹೆಚ್ಚು ಆಕರ್ಷಕವಾಗಿರುತ್ತದೆ. ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ ಪ್ರಶಸ್ತಿಗಳನ್ನು ಗೆಲ್ಲುವುದು ಪೈಲ್ವಾನರ ಕನಸಾಗಿರುತ್ತದೆ. ನಾಡಕುಸ್ತಿಯನ್ನು ರಾಜ ಮಹಾರಾಜರ ಕಾಲದಿಂದಲೂ ಯಶಸ್ವಿಯಾಗಿ ನಡೆಸಲಾಗುತ್ತದೆ. ದಸರಾ ಕುಸ್ತಿಯಿಂದ ಸಾವಿರಾರು ಪೈಲ್ವಾನರು ಬೆಳೆದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹ, ದಸರಾ ಕುಸ್ತಿ ಸಮಿತಿ ಕಾರ್ಯದರ್ಶಿ ರವಿಕುಮಾರ್, ಹಿರಿಯ ಪೈಲ್ವಾನರು ಉಪಸ್ಥಿತರಿದ್ದರು.