ಬೆಂಗಳೂರು: ರಾಜ್ಯದಲ್ಲಿ ರಕ್ತದ ಕೊರತೆ ನೀಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನಗಳನ್ನು ಪರಿಚಯಿಸುತ್ತಿದೆ. ರಾಜ್ಯದ ತುಮಕೂರು, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲಾ ವ್ಯಾಪ್ತಿಗಳಲ್ಲಿ ಈ ವಾಹನವು ಸಂಚರಿಸಲಿವೆ.
ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಜು.22ರಂದು ರಕ್ತ ಸಂಗ್ರಹಣಾ ವಾಹನಗಳಿಗೆ ಆರೋಗ್ಯ ಸಚಿವ ಶಿವಾನಂದ ಎಸ್ ಪಾಟೀಲ್ ಚಾಲನೆ ನೀಡಲಿದ್ದಾರೆ.
ವರ್ಷದಿಂದ ವರ್ಷಕ್ಕೆ ರಕ್ತದ ಬೇಡಿಕೆ ಕ್ರಮೇಣವಾಗಿ ಏರಿಕೆಯಾಗುತ್ತಿದೆ. ರಾಜ್ಯದ ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದರೂ ರಕ್ತದ ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖಾಸಗಿ ರಕ್ತನಿಧಿಯಿಂದ ರಕ್ತ ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ರಕ್ತನಿಧಿ ಕೇಂದ್ರಗಳಲ್ಲಿ ಮೂರರಿಂದ ನಾಲ್ಕು ಯುನಿಟ್ ಮಾತ್ರ ಸಂಗ್ರಹವಿದೆ.
ಹೀಗಾಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ದೇಶದ ವಿವಿಧ ರಾಜ್ಯಗಳಲ್ಲಿ ರಕ್ತನಿಧಿ ಕೇಂದ್ರಗಳಿಗೆ ವರ್ಷದ ಎಲ್ಲ ದಿನ ಅಗತ್ಯ ಪ್ರಮಾಣದಲ್ಲಿ ರಕ್ತ ಶೇಖರಣೆಗೆ ನೆರವಾದ ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನವನ್ನು ರಾಜ್ಯದಲ್ಲೂ ಪರಿಚಯಿಸಲಾಗುತ್ತಿದೆ. ಆಧುನಿಕ ಸೌಲಭ್ಯ ಒಳಗೊಂಡಿರುವ ಈ ವಾಹನ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಿ ಪ್ರತಿನಿತ್ಯ ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಪೂರೈಕೆ ಮಾಡಲಿದೆ.
ಈ ವಾಹನವು ರಕ್ತದಾನ ಶ್ರೇಷ್ಠ ದಾನ ಎಂದು ರಸ್ತೆಯುದ್ದಕ್ಕೂ ಸಂದೇಶ ಸಾರುತ್ತ ದಾನಿಗಳಿಗೆ ರಕ್ತದಾನದ ಮಹತ್ವ ತಿಳಿಸಲಿದೆ. ವಾಹನದಲ್ಲಿ ರಕ್ತದಾನಕ್ಕೆ ಅಗತ್ಯವಿರುವ ಸಲಕರಣೆಗಳಾದ ಎರಡು ಬೆಡ್, ರೆಫ್ರಿಜರೇಟರ್, ರಕ್ತ ಪರೀಕ್ಷೆ ಕಿಟ್ ವ್ಯವಸ್ಥೆಯಿದೆ. ಇನ್ನು ಈ ವಾಹನದಲ್ಲಿ ಒಬ್ಬ ವೈದ್ಯ, ಕೌನ್ಸಲರ್, ಇಬ್ಬರು ಶುಶ್ರೂಷಕರು, ಇಬ್ಬರು ಗ್ರೂಪ್ ಡಿ ದರ್ಜೆ ಸಿಬ್ಬಂದಿ ಹಾಗೂ ಚಾಲಕ ಕಾರ್ಯನಿರ್ವಹಿಸುತ್ತಾರೆ.
ವಾಹನ ವರ್ಷದ ಎಲ್ಲ ದಿನ ಕಾರ್ಯನಿರ್ವಹಿಸಲಿದ್ದು, ಪ್ರತಿನಿತ್ಯ 15ರಿಂದ 18 ಯುನಿಟ್ ರಕ್ತ ಸಂಗ್ರಹಿಸಲಿದೆ. ಜಿಲ್ಲಾ ಕ್ಷಯರೊಗ ಅಧಿಕಾರಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿವೆ. ಪೂರ್ವನಿಗದಿಯಂತೆ ಶಾಲಾ- ಕಾಲೇಜು, ಸಭೆ- ಸಮಾರಂಭಗಳಿಗೆ ತೆರಳಿ ರಕ್ತ ಸಂಗ್ರಹಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ರಕ್ತಕೋಶ ಅಧಿಕಾರಿಗಳು ತಿಳಿಸಿದರು.