Advertisement

ಮರ ಗಣತಿ ಅಭಿಯಾನಕ್ಕೆ ಚಾಲನೆ

09:05 PM Nov 17, 2019 | Team Udayavani |

ಮೈಸೂರು: ಬೆಂಗಳೂರಿನ ವೃಕ್ಷ ಫೌಂಡೇಷನ್‌ ವತಿಯಿಂದ ನಡೆದ ಮರಗಳ ಗಣತಿ ಅಭಿಯಾನಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸುತ್ತಳತೆ ಪಟ್ಟಿ ಹಿಡಿದು ಮರದ ಗಾತ್ರ ಅಳೆಯುವ ಮೂಲಕ ಚಾಲನೆ ನೀಡಿದರು. ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಉದ್ಯಾನವನ ಬಳಿ ಭಾನುವಾರ ಬೆಳಗ್ಗೆ ಮರಗಳ ಗಣತಿಗೆ ಆರಂಭಿಸಲಾಯಿತು.

Advertisement

ಮರಳ ಸಂರಕ್ಷಣೆಯಲ್ಲಿ ತೊಡಗಿ: ಬೆಂಗಳೂರಿನಲ್ಲಿ ವೃಕ್ಷಗಳ ಗಣತಿ ಮಾಡಿ ಬಿಬಿಎಂಪಿಗೆ ವರದಿ ನೀಡಿರುವ ವೃಕ್ಷ ಫೌಂಡೇಷನ್‌ ಮೈಸೂರಿನಲ್ಲೂ ಮರಗಳ ಗಣತಿ ನಡೆಸಲು ಉದ್ದೇಶಿಸಿದೆ. ಈ ಅಭಿಯಾನಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮರದ ಗಾತ್ರ ಅಳೆದು, ಅದರ ಸುತ್ತಳತೆಯ ಮಾಹಿತಿ ಮೂಲಕ ಚಾಲನೆ ನೀಡಿದರಲ್ಲದೆ, ಮರಗಳ ಅಂಕಿ ಅಂಶಗಳು ದಾಖಲೀಕರಣ ಉತ್ತಮ. ಮರಗಳ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.

ಮರಗಳ ಗಣತಿ ಅಗತ್ಯ: ಪಾಲಿಕೆ ಸದಸ್ಯ ಶಿವಕುಮಾರ್‌ ಮಾತನಾಡಿ, ನಗರದಲ್ಲಿ ಮರಗಳ ಗಣತಿ ಆರಂಭಿಸಿರುವುದು ಶ್ಲಾಘನೀಯ. ಗಣತಿ ನಂತರ ಮೈಸೂರಿನಲ್ಲಿ ಯಾವ ಯಾವ ಪ್ರಭೇದದ ಮರಗಳಿವೆ ಎಂಬ ಅಂಶ ತಿಳಿಯಲಿದೆ. ಅಲ್ಲದೆ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಗಣತಿ ಅಗತ್ಯವಾಗಿದೆ. ಇನ್ನೂ ಯಾವ ಪ್ರಭೇದದ ಗಿಡಗಳು ಬೇಕು, ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ತಿಳಿಸಿದರೆ ಎಂದು ಹೇಳಿದರು.

ಎಲ್ಲ ತಳಿಯ ಮರಗಳ ಮಾಹಿತಿ: ವೃಕ್ಷ ಫೌಂಡೇಷನ್‌ ಸಂಸ್ಥಾಪಕ ವಿಜಯ್‌ ನಿಶಾಂತ್‌ ಮಾತನಾಡಿ, ಇಂದು ಬೆಂಗಳೂರಿನಲ್ಲಿ ಒಂದು ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಮರಗಳ ಗಣತಿ ನಡೆಸಿ ಬಿಬಿಎಂಪಿಗೆ ವರದಿ ಸಲ್ಲಿಸಲಾಗಿತ್ತು. ಇದರ ಮಹತ್ವವನ್ನು ಮನಗಂಡು ಹೈಕೋರ್ಟ್‌ ಬೆಂಗಳೂರಾದ್ಯಂತ ಮರಗಳ ಗಣತಿಯನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿದೆ. ಇದಕ್ಕಾಗಿ ಬಿಬಿಎಂಪಿ 4 ಕೋಟಿ ರೂ. ಮೀಸಲಿಟ್ಟಿದೆ.

ಮೈಸೂರಿನಲ್ಲೂ ಮರಗಳ ಗಣತಿ ಮಾಡಿ, ದಾಖಲೀಕರಣ ಮಾಡಿದ ನಂತರ ಮೈಸೂರು ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆಗೆ ನೀಡಲಾಗುತ್ತದೆ. ಇದರಿಂದ ಯಾವ ಬಡಾವಣೆಯಲ್ಲಿ ಎಷ್ಟು ಮರವಿದೆ. ಯಾವ ತಳಿಯ ಮರ, ದುರ್ಬಲ ಮರಗಳು, ಆರೋಗ್ಯವಂತ ಮರಗಳ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಲಭ್ಯವಾಗಲಿದೆ.

Advertisement

ಇದಕ್ಕಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದರಲ್ಲಿ ಮರಗಳ ಮಾಹಿತಿಯನ್ನು ನಮೂದಿಸಿ, ಅವುಗಳ ಚಿತ್ರವನ್ನು ತೆಗೆದು ಅಪ್‌ಲೋಡ್‌ ಮಾಡಲಾಗುತ್ತದೆ. ಅಲ್ಲದೆ ಮರವಿರುವ ಲೋಕೆಷನ್‌ ನಮೂದಿಸುವುದರಿಂದ ಮೈಸೂರಿನಲ್ಲಿರುವ ಯಾವುದೇ ಮರವನ್ನು ಪಾಲಿಕೆ ಹಾಗೂ ಅರಣ್ಯ ಇಲಾಖೆ ಅನುಮತಿಯಿಲ್ಲದೆ ಕಡಿಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಆ್ಯಪ್‌ನಲ್ಲಿದೆ ಸಮಗ್ರ ಮಾಹಿತಿ: ಆ್ಯಪ್‌ನಲ್ಲಿ ಮರದ ಸುತ್ತಳತೆ, ಎತ್ತರ, ಆ ಮರದಲ್ಲಿ ಪಕ್ಷಿಗಳ ಗೂಡು ಇರುವ ಬಗ್ಗೆ, ಕೀಟಗಳ ವಾಸದ ಬಗ್ಗೆ, ಪಕ್ಷಿಗಳಿದ್ದರೆ ಯಾವ ಪ್ರಭೇದದ ಪಕ್ಷಿಯನ್ನು ಆಕರ್ಷಿಸುತ್ತವೆ ಎಂಬ ಮಾಹಿತಿಯನ್ನೂ ನಮೂದಿಸಲಾಗುತ್ತದೆ. ಗಣತಿಯಲ್ಲಿ ವಾರ್ಡ್‌ವಾರು, ಕ್ಷೇತ್ರವಾರು ಮರಗಳ ಅಂಕಿ ಅಂಶ ದೊರೆಯಲಿದೆ. ಅಲ್ಲದೆ ಪರಿಸರ ಸಮತೋಲನ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಗುಣಮಟ್ಟದ ಆಮ್ಲಜನಕ ಇರುವ ಪರಿಸರ ಕೊಡುಗೆ ನೀಡಲು ನೆಡಬೇಕಾದ ಗಿಡ‌ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಈಗಾಗಲೇ ಅರಣ್ಯ ಇಲಾಖೆ ಕೋಟಿ ವೃಕ್ಷ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಯಾವ ಬಡಾವಣೆಗಳಲ್ಲಿ ಗಿಡ ನೆಡಬಹುದೆಂಬ ಮಾಹಿತಿಯೂ ಲಭ್ಯವಾಗಲಿದೆ ಎಂದು ಹೇಳಿದರು. ಆರ್‌ಎಫ್ಒ ಗೋವಿಂದರಾಜು, ವೃಕ್ಷ ಫೌಂಡೇಶನ್‌ ಸಹಾಯಕ ಸಂಸ್ಥಾಪಕ ಆರ್‌.ರವಿಕುಮಾರ್‌, ಎಸ್‌.ಶರೀಫ್, ಟಿ.ವಿ.ಚಾವೀನ್‌, ಇಂಡಿಯನ್‌ ವೈಲ್ಡ್‌ಲೈಫ್ ಎಕ್ಸ್‌ಪ್ರೋರರ್ನ ಭಾಗ್ಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next