ಬೆಂಗಳೂರು: ಅಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಪರೂಪದ ಕಲಾಕೃತಿಗಳಾದರೂ ಮುಂದುವರಿದಂತೆ ಕಂಡುಬರುವುದು ಕಣ್ಮನ ತಣಿಸುವ ವೈವಿಧ್ಯಮಯ ಬಣ್ಣದ ಚಿತ್ರಗಳು. ನೋಡನೋಡುತ್ತಿದ್ದಂತೆ ನಿಮ್ಮನ್ನು ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. ಈ ಅದ್ಭುತ ಕಲಾಕೃತಿಗಳು. ಅವು ಎಲ್ಲಿವೆ ಎಂದು ಯೋಚಿಸುತ್ತಿದೀªರೆ, ಅವುಗಳು ನಗರದ ಯುಬಿ ಸಿಟಿಯ ಕಲೆಕ್ಷನ್ ಕೇಂದ್ರದಲ್ಲಿ ಪ್ರದರ್ಶನಗೊಂಡಿವೆ.
ದೇಶದ 17 ಖ್ಯಾತ ಕಲಾವಿದರ ವಿಶಿಷ್ಟ ಕಲಾಕೃತಿಗಳು ಪ್ರದರ್ಶನಗೊಂಡಿರುವುದು ಬಹುನಿರೀಕ್ಷಿತ ಆರ್ಟ್ ಬೆಂಗಳೂರು-2018ರ ಕಲಾ ಉತ್ಸವದಲ್ಲಿ. ನ.2 ರಿಂದ 11ರವರೆಗೆ 10 ದಿನಗಳು ನಡೆಯುವ ಈ ಉತ್ಸವದಲ್ಲಿ ದೇಶದ ಖ್ಯಾತ ಕಲಾವಿದರಾದ ಬಾಲನ್ ನಂಬಿಯಾರ್, ಗುರುದಾಸ್ ಶೆಣೈ, ವಿಪ್ತ ಕಪಾಡಿಯ, ಪಲ್ಲನ್ ದಾರುವಾಲ, ಡಿ. ವೆಂಕಟಪತಿ, ಚಂದನ್ ಭೌಮಿಕ್, ರೋಹಲ್ ಸುಲೈಮಾನ್, ಯುವನ್ ಬೋತಿಸತ್ವಾವುರ್, ಆಶಿಷ್ ದುಬೆ ಮುಂತಾದವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಆರ್ಟ್ ಬೆಂಗಳೂರು ಸಂಸ್ಥಾಪಕಿ ಮತ್ತು ಪ್ರಸ್ಟಿಜ್ ಗ್ರೂಪ್ ನಿರ್ದೇಶಕಿ ಉಜ್ಮಾ ಇರ್ಫಾನ್ ಅವರು ಮಾತನಾಡಿ, ಒಂದು ಸುಂದರ ಕಲಾಕೃತಿಯನ್ನು ಕಂಡು ಮೆಚ್ಚಿಕೊಂಡಾಗ ಬದುಕಿನ ಹಲವಾರು ಒತ್ತಡಗಳು ಕಡಿಮೆಯಾಗುತ್ತವೆ. ಈ ಉತ್ಸವದ ಅಸಂಖ್ಯಾತ ಚಿತ್ರಗಳನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ನಮ್ಮಲ್ಲಿ ಗುಣಮಟ್ಟದ ಗ್ಯಾಲರಿಗಳ ಅಲಭ್ಯತೆ, ವಸ್ತು ಸಂಗ್ರಹಾಲಯಗಳು ಹಾಗೂ ಸಾರ್ವಜನಿಕ ಕಲಾ ಸ್ಥಳಗಳ ಕೊರತೆ ಹಾಗೂ ಸುಲಭವಾಗಿ ಪ್ರವೇಶಿಸಬಹುದಾದ ಕಲಾ ಶಿಕ್ಷಣ ಸಂಸ್ಥೆಗಳ ಅಲಭ್ಯದಿಂದ ಕಲೆ ಜನರಿಂದ ಕಡೆಗಣಿಸಲ್ಪಟ್ಟಿದೆ ಎಂದು ಸಂಸ್ಥೆಯ ಕ್ಯೂರೇಟರ್ ಅಭಿಷೇಕ್ ನಾಯ್ಡು ಬೇಸರ ವ್ಯಕ್ತಪಡಿಸಿದರು.
ಫೆಸ್ಟಿವಲ್‌ನಲ್ಲಿ ಏನೇನಿವೆ: “ಆರ್ಟ್ ಬೆಂಗಳೂರು-2018’ರ ಆರ್ಟ್ ಫೆಸ್ಟಿವಲ್‌ನ 8ನೇ ಆವೃತ್ತಿಯಲ್ಲಿ ಛಾಯಾಗ್ರಹಣ, ಫೋಟೋ ಮಾಧ್ಯಮ, ಮಿಶ್ರ ಮಾಧ್ಯಮ ಕಲಾಕೃತಿಗಳು, ತೈಲ ವರ್ಣಗಳು, ಅಕ್ರಿಲಿಕ್‌ಗಳು, ಪೆನ್ ಮತ್ತು ಇಂಕ್ ರೇಖಾಚಿತ್ರಗಳು, ಶಿಲ್ಪಗಳು (ಮರದ, ಉಕ್ಕು ಮತ್ತು ಕಾಗದ) ಮತ್ತು ವಿಡಿಯೋ ಕಲಾಕೃತಿಗಳನ್ನು ಕಾಣಬಹುದು.