ಮೈಸೂರು: ಮೈಸೂರು ಹಾಗೂ ತಮಿಳುನಾಡಿನ ಚೆನ್ನೈ ನಡುವೆ ಬೆಳಗಿನ ಸಮಯದಲ್ಲಿ ವಿಮಾನ ಸೇವೆಗೆ ಶುಕ್ರವಾರ ಸಂಸದ ಪ್ರತಾಪ್‌ಸಿಂಹ ಹಾಗೂ ಮೇಯರ್ ಪುಷ್ಪಲತಾ ಚಾಲನೆ ನೀಡಿದರು.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊತ್ತ ವಿಮಾನಕ್ಕೆ ಚಾಲನೆ ದೊರೆತಿದ್ದು, ತಮಿಳುನಾಡಿನ ಚೆನ್ನೈನಿಂದ ಬೆಳಗ್ಗೆ 6.50ಕ್ಕೆ ಹೊರಡುವ ಈ ವಿಮಾನ (ಎಟಿಆರ್ 72) ಬೆಳಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವಿಮಾನ ಪ್ರತಿನಿತ್ಯ ಬೆಳಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು, ಚೆನ್ನೈ ತಲುಪಲಿದೆ.
ಉಡಾನ್ ಯೋಜನೆಯ ನಂತರ ಸೇವೆ ಒದಗಿಸುತ್ತಿರುವ ಪ್ರಥಮ ವಿಮಾನ ಇದಾಗಿದ್ದು, ಸರ್ಕಾರದ ಯಾವುದೇ ಸಬ್ಸಿಡಿ ಅಪೇಕ್ಷಿಸದೇ ಹಾರಾಟ ಸೇವೆ ಒದಗಿಸಲಿದೆ. ಬೆಳಗಿನ ವೇಳೆ ಪ್ರಯಾಣಿಕರಿಂದ ವಿಮಾನ ಸೇವೆ ಆರಂಭಿಸುವಂತೆ ಒತ್ತಾಯ ಕೇಳಿ ಬಂದಿದ್ದರಿಂದ ವಿಮಾನ ಹಾರಾಟ ಆರಂಭಿಸಲಾಗಿದೆ.
ಈ ವೇಳೆ ಮಾತನಾಡಿದ ಸಂಸದ ಪ್ರತಾಪಸಿಂಹ, ಮೈಸೂರು-ಚೆನ್ನೈ ನಡುವೆ ಸಂಜೆ ವೇಳೆ ಸಂಚರಿಸುತ್ತಿರುವ ವಿಮಾನಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಬೆಳಗಿನ ವೇಳೆ ವಿಮಾನ ಸೇವೆ ಆರಂಭಿಸಲಾಗಿದೆ. ನಿತ್ಯ ಬೆಳಗ್ಗೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೂಂದು ವಿಮಾನ (ಎಟಿಆರ್-72) ಹಾರಾಟ ಆರಂಭಿಸಲಿದೆ. ಪ್ರತಿದಿನ ಬೆಳಗ್ಗೆ ಚೆನ್ನೈ ಪ್ರಯಾಣಕ್ಕೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಟ್ರೂಜೆಟ್ ವಿಮಾನದ ಹಾರಾಟ ಆರಂಭಿಸಲಾಗುತ್ತಿದೆ ಎಂದರು.
ಶಿರಡಿ-ಬೆಳಗಾವಿ ನಗರಗಳಿಗೆ ಮೈಸೂರಿನಿಂದ ಮತ್ತೆ ಎರಡು ವಿಮಾನಗಳ ಹಾರಾಟಕ್ಕೆ ಟ್ರೂಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಆಸಕ್ತಿ ತೋರಿಸಿದ್ದು ಈಗಾಗಲೇ ಸಮೀಕ್ಷೆ ನಡೆಸಿವೆ. ಮೈಸೂರು-ಶಿರಡಿ ನಡುವೆ ಬೆಂಗಳೂರು ಮಾರ್ಗವಾಗಿ ಹಾರಾಟ ನಡೆಸಲು ಇಂಡಿಗೋ ತಯಾರಿ ನಡೆಸಿದ್ದು, ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ನವೆಂಬರ್ ಅಂತ್ಯದಿಂದ ಈ ಸೇವೆ ಆರಂಭವಾಗುವ ನಿರೀಕ್ಷೆಯಿದ್ದು, ಉತ್ತರ ಕರ್ನಾಟಕ ಭಾಗದ ವರ್ತಕರು, ಉದ್ದಿಮೆದಾರರನ್ನು ಗುರಿಯಾಗಿಸಿಕೊಂಡು ಬೆಳಗಾವಿ-ಮೈಸೂರಿಗೆ ವಿಮಾನ ಸೇವೆ ಆರಂಭಿಸಲು ಟ್ರೂಜೆಟ್ ಆಸಕ್ತಿ ತೋರಿದ್ದು, ಡಿಸೆಂಬರ್ ಎರಡನೇ ವಾರ ಕಾರ್ಯಾರಂಭಗೊಳಿಸಲಿ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಈ ವಿಮಾನ ಸೇವೆ ಆರಂಭದಿಂದ ಕೇವಲ ಪ್ರಯಾಣಿಕರು, ಉದ್ಯಮಗಳಲ್ಲದೆ ಅಮೆರಿಕಕ್ಕೆ ತೆರಳಲು ವೀಸಾ ಪಡೆದುಕೊಳ್ಳುವ ಪ್ರವಾಸಿಗರು ಚೆನ್ನೈಗೆ ತೆರಳಲು ಹೆಚ್ಚು ಅನುಕೂಲವಾಗಲಿದೆ ಎಂದರು. ಈ ವೇಳೆ ಡಿಸಿಪಿ ಎಂ. ಮುತ್ತುರಾಜ್, ಸೇಫ್ ವ್ಹೀಲ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್, ಬಿಜೆಪಿ ಮುಖಂಡರಾದ ರಾಜೇಂದ್ರ, ಅನಿಲ್ ಥಾಮಸ್, ಉದ್ಯಮಿ ಸುಧಾಕರ ಶೆಟ್ಟಿ ಇತರರಿದ್ದರು.