ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ಗುರುತಿಸಿ, ವಿಮರ್ಶಿಸಿ ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಸಂಸ್ಥೆಗೆ ಚಾಲನೆ ನೀಡಲಾಗಿದೆ. ಕನ್ನಡ ಚಲನಚಿತ್ರರಂಗ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಯಾಗಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಲಾಂಛನವನ್ನು ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ವಿ ನಾಗೇಂದ್ರ ಪ್ರಸಾದ್ ಬಿಡುಗಡೆಗೊಳಿಸಿ ಅಕಾಡೆಮಿಗೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಟ ಶಿವರಾಜಕುಮಾರ್, ಮೂವತ್ಮೂರು ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಿದ್ದೇನೆ ಚಿತ್ರರಂಗ ಹಾಗೂ ಚಿತ್ರೋದ್ಯಮದ ನಡುವೆ ಉತ್ತಮ ನಂಟಿದೆ. ಕನ್ನಡದಲ್ಲಿ ಸುದೀಪ್, ಅಪ್ಪು, ದರ್ಶನ್, ಯಶ್, ಶಿವರಾಜಕುಮಾರ್ ಮಾತ್ರ ಹೀರೋಗಳಲ್ಲ ಸಾಕಷ್ಟು ಜನ ಹೊಸ ಹೀರೋಗಳಿದ್ದಾರೆ. ಎಲ್ಲರಂತೆ ಅವರಿಗೂ ಪ್ರೋತ್ಸಾಹ ಸಿಗಲಿ. ಚಿತ್ರರಂಗದಲ್ಲಿ ಭೇದ-ಭಾವವಿಲ್ಲದೆ ಎಲ್ಲರೊಡನೆ ಮುನ್ನಡೆಯಬೇಕು. ಇಲ್ಲಿ ಕೊಟ್ಟು, ತೆಗೆದುಕೊಳ್ಳುವ ಮನಸ್ಸಿದ್ದರೆ ಮಾತ್ರ ಬೆಳೆಯಲು ಸಾಧ್ಯ. ಒಂದು ವೇಳೆ ನಾನೊಬ್ಬನೇ ಎಂದು ಯಾರಾದರೂ ಅಂದುಕೊಂಡಲ್ಲಿ ಅಂತಹವರು ನೆಲ ಕಚ್ಚುತ್ತಾರೆ ಎಂದರು.
“ಇನ್ನು ಮುಂದೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಯೂ ಶುರುವಾಗುತ್ತಿರುವುದು ಒಳ್ಳೆಯ ವಿಷಯ. ಪ್ರಶಸ್ತಿಗಳಲ್ಲಿ ದೊಡ್ಡದು, ಚಿಕ್ಕದು ಎಂಬ ತಾರತಮ್ಯ ಸಲ್ಲದು. ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಂದು ಕೂಡ ಪ್ರೋತ್ಸಾಹ ನೀಡುವಂತಹುದು. ವೇದಿಕೆಯಲ್ಲಿ ನನ್ನನ್ನು ಚಿತ್ರರಂಗದ ಒಂದು ಪಿಲ್ಲರ್ ಅಂತ ಕರೆದರು. ಆದರೆ, ರವಿಚಂದ್ರನ್, ಶ್ರೀನಾಥ್, ಅನಂತನಾಗ್ ಅವರಂತಹ ನನಗಿಂತಲೂ ಹಿರಿಯ ನಟರಿದ್ದು, ಈಗಲೂ ಸಕ್ರಿಯರಾಗಿದ್ದಾರೆ. ಅವರೆಲ್ಲರೂ ಚಿತ್ರರಂಗದ ಆಧಾರ ಸ್ತಂಭಗಳಾಗಿದ್ದು, ನಾನು ಕೇವಲ ಇಲ್ಲಿ ಇಟ್ಟಿಗೆಯಂತಿರಲು ಇಷ್ಟಪಡುತ್ತೇನೆ’ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ವಿ ನಾಗೇಂದ್ರ ಪ್ರಸಾದ್, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶುರುವಾಗಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಅಭ್ಯುದಯಕ್ಕೆ ತಮ್ಮಿಂದಾಗುವ ಎಲ್ಲ ಸಹಾಯ, ಸಹಕಾರ ನೀಡಲು ಸಿದ್ಧ ಎಂದು ಒಕ್ಕೊರಲಿನಿಂದ ಘೋಷಿಸಿದರು.