ಮೈಸೂರು: ಮಹಿಷಾ ದಸರಾ ಅಂಗವಾಗಿ ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಆಯೋಜಿಸಿದ್ದ ಮೆರವಣಿಗೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮಹಿಷ ಒಬ್ಬ ಮಹಾರಾಜ. ದಲಿತ ಮತ್ತು ಶೂದ್ರ ಆಗಿದ್ದರಿಂದ ಕೆಲವು ಸಮುದಾಯಗಳು ವಿರೋಧಿಸಿವೆ. ಆದರೆ ಮಹಿಷ ರಾಜನಾಗಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. ಅವುಗಳನ್ನು ಜನರಿಗೆ ತಿಳಿಸಲು ಮಹಿಷ ದಸರಾ ಆಚರಿಸಲಾಗುತ್ತಿದೆ ಎಂದರು.
ಚಾಮುಂಡಿಬೆಟ್ಟದಲ್ಲಿರುವ ಮಹಿಷ ಪ್ರತಿಮೆ ಬದಲಿಸುವ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಪುರಭವನದಿಂದ ಹೊರಟ ಮೆರವಣಿಗೆ ಚಾಮುಂಡಿಬೆಟ್ಟದವರೆಗೂ ಸಾಗಿತು. ಡೊಳ್ಳು ಕುಣಿತ, ಪೂಜಾ ಕುಣಿತ, ನಾದಸ್ವರ ಮುಂತಾದ ಕಲಾತಂಡಗಳು ಭಾಗವಹಿಸಿದ್ದವು. ಅಲ್ಲದೆ ಮಹಿಷಧಾರಿ ಬೈಕ್‌ನಲ್ಲಿ ಕುಳಿತು ಮೆರವಣಿಗೆಯಲ್ಲಿ ತೆರಳುವ ಮೂಲಕ ಎಲ್ಲರ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಸಿದ್ದಸ್ವಾಮಿ ರಚಿಸಿದ ಬೌದ್ಧರಾಜ ಮಹಿಷಾಸುರ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ
ಪ್ರೊ.ಕೆ.ಎಸ್.ಭಗವಾನ್, ಪ್ರೊ.ಮಹೇಶ್ ಚಂದ್ರಗುರು, ಪ್ರಸನ್ನ, ಸಿದ್ದಸ್ವಾಮಿ, ಶಾಂತರಾಜು, ಕೋಟೆ ಬೆಟ್ಟಯ್ಯ ಸೇರಿದಂತೆ 10 ಮಂದಿಗೆ 2018 ಮಹಿಷ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಷ್ಟಾಂಗ ಧ್ಯಾನ ಕೇಂದ್ರದ ಭಂತೇ ಬೋದಿ ದತ್ತ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಮಾಜಿ ಮೇಯರ್ ಪುರುಷೋತ್ತಮ್, ಕೆ.ಎಸ್. ಶಿವರಾಮು ಇತರರಿದ್ದರು.