Advertisement

ದೇಶದ ಮೊದಲ ಹೈಡ್ರಾಲಿಕ್‌ ಜಿಮ್‌ಗೆ ಚಾಲನೆ

12:28 PM Sep 11, 2018 | Team Udayavani |

ಬೆಂಗಳೂರು: ಹೈಡ್ರಾಲಿಕ್‌ ವ್ಯವಸ್ಥೆಯಿರುವ ಜಿಮ್‌ ಉಪಕರಣಗಳನ್ನು ಪಾಲಿಕೆ ವ್ಯಾಪ್ತಿಯ ಎಲ್ಲ ಉದ್ಯಾನಗಳಲ್ಲಿ ಅಳವಡಿಸುವ ಕುರಿತು ಚಿಂತನೆ ನಡೆಸುವುದಾಗಿ ಮೇಯರ್‌ ಆರ್‌.ಸಂಪತ್‌ರಾಜ್‌ ಭರವಸೆ ನೀಡಿದ್ದಾರೆ.

Advertisement

ಯಡಿಯೂರು ವಾರ್ಡ್‌ನಲ್ಲಿ ಬಿಬಿಎಂಪಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ದೇಶದ ಮೊದಲ ಹೈಡ್ರಾಲಿಕ್‌ ವ್ಯಾಯಾಮ ಉಪಕರಣಗಳ ಮಹಾಕಾಯ ವ್ಯಾಯಾಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಮೊದಲ ಬಾರಿಗೆ ಬಿಬಿಎಂಪಿ ವತಿಯಿಂದ ಹೈಡ್ರಾಲಿಕ್‌ ವ್ಯಾಯಾಮ ಉಪಕರಣಗಳ ವ್ಯಾಯಾಮ ಕೇಂದ್ರ ಆರಂಭಿಸಿದ್ದು, ಯುವಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ಇದರ ಸದುಪಯೋಗ ಪಡೆಯಲು ಮುಂದಾಗಬೇಕು ಎಂದರು. 

ಹೈಡ್ರಾಲಿಕ್‌ ಉಪಕರಣಗಳಿಂದ ಎಲ್ಲ ವಯೋಮಾನದವರಿಗೆ ವ್ಯಾಯಾಮ ಮಾಡಲು ಸುಲಭವಾಗಲಿದೆ. ಹೀಗಾಗಿ ಪಾಲಿಕೆಯ ಉದ್ಯಾನಗಳಲ್ಲಿ ಹೈಡ್ರಾಲಿಕ್‌ ಉಪಕರಣಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗುವುದು. ಜತೆಗೆ ಸಂಜೀವಿನಿ ವನದಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಇದೇ ಮಾದರಿಯನ್ನು ಉಳಿದ ಉದ್ಯಾನಗಳಲ್ಲಿಯೂ ಅಳವಡಿಸಿದರೆ ವಿದ್ಯುತ್‌ ಉಳಿತಾಯ ಮಾಡಬಹುದಾಗಿದೆ ಎಂದು ಹೇಳಿದರು. 

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ವಿವಿಧ ಪ್ರಭೇಧಗಳ 1,500ಕ್ಕೂ ಹೆಚ್ಚು ಗಿಡಮೂಲಿಕಾ ಸಸಿಗಳಿರುವ ಯಡಿಯೂರಿನ ಸಂಜೀವಿನಿ ವನದಲ್ಲಿ ಪಾಲಿಕೆ 40 ಲಕ್ಷ ರೂ. ವೆಚ್ಚದಲ್ಲಿ ಹೈಡ್ರಾಲಿಕ್‌ ವ್ಯಾಯಾಮ ಕೇಂದ್ರ ಆರಂಭಿಸಿದ್ದು, 15ವರ್ಷದಿಂದ 90ವರ್ಷ ವಯೋಮಾನದ ಎಲ್ಲರೂ ದೈಹಿಕ ವ್ಯಾಯಾಮ ಮಾಡಬಹುದಾಗಿದೆ ಎಂದರು.

ಹೊಸ ತಂತ್ರಜ್ಞಾನ ಬಳಸಿ ವ್ಯಾಯಾಮ ಕೇಂದ್ರ ಆರಂಭಿಸಲಾಗಿದ್ದು, ಎಲ್ಲಾ ನಾಗರಿಕರ ದೈಹಿಕ ವ್ಯಾಯಾಮಕ್ಕೆ ಉಪಯೋಗವಾಗಿದೆ. ಸಂಜೀವಿನಿ ವನದಲ್ಲಿ ಸುತ್ತಲೂ ಔಷಧ ಸಸ್ಯಗಳಿದ್ದು, ಪರಿಸರ ಸ್ನೇಹಿಯಾಗಿದೆ. ಇಲ್ಲಿ ಯಾರು ಬೇಕಾದರೂ ಬಂದು ವ್ಯಾಯಾಮ ಮಾಡಿಕೊಂಡು ಹೊಗಬಹುದು ಎಂದು ಹೇಳಿದರು.

Advertisement

ಬಿಜೆಪಿ ನಗರ ಜಿಲ್ಲಾ ವಕ್ತಾರ ಎನ್‌.ಆರ್‌.ರಮೇಶ್‌ ಮಾತನಾಡಿ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ಹೈಡ್ರಾಲಿಕ್‌ ವ್ಯಾಯಾಮ ಉಪಕರಣಗಳನ್ನು ತರಿಸಲಾಗಿದೆ. ವ್ಯಾಯಾಮ ಮಾತ್ರವಲ್ಲದೇ ಯೋಗಕ್ಕೂ ಅನುಕೂಲವಾಗಿದೆ. ಸುತ್ತಲಿನ ನಾಗರಿಕರು ವ್ಯಾಯಾಮ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ 10 ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, 82 ಹೆಣ್ಣು ಮಕ್ಕಳಿಗೆ 3 ಸಾವಿರ ರೂ. ಟೈಲರಿಂಗ್‌ ತರಬೇತಿಯ ಸಹಾಯಧನ ನೀಡಲಾಯಿತು. ಈ ವೇಳೆ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌  ಉಪಸ್ಥಿತರಿದ್ದರು.

ಬಿಬಿಎಂಪಿಯ 198 ವಾರ್ಡ್‌ಗಳಿಗೂ ನಾನು ಮೇಯರ್‌ ಆಗಿದ್ದು, ಪಕ್ಷಾತೀತವಾಗಿ ಕರ್ತವ್ಯ ಮಾಡಬೇಕಿದೆ. ಆದ್ದರಿಂದ ಭಾರತ ಬಂದ್‌ ಇದ್ದರೂ, ಮಹಾಕಾಯ ವ್ಯಾಯಾಮ ಕೇಂದ್ರ ಉದ್ಘಾಟಿಸಲು ಬಂದಿದ್ದೇನೆ. 
-ಆರ್‌.ಸಂಪತ್‌ರಾಜ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next