ಬೆಂಗಳೂರು: ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಮಾ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಈ ಕುರಿತು ಭಾನುವಾರ ಮುಖ್ಯಮಂತ್ರಿಯವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಸಭೆ ನಡೆಸಿ ಸಂಘಗಳ ರಚನೆ ಪ್ರಗತಿಯ ಕುರಿತು ಮಾಹಿತಿ ಪಡೆದರು.
ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಇಂತಹ ಯೋಜನೆ ರೂಪಿಸಲಾಗಿದ್ದು, ಜಿಪಂ ಸಿಇಒಗಳು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿ, ಸುತ್ತು ನಿಧಿ ಹಂಚಿಕೆಯೊಂದಿಗೆ ಅಧಿಕಾರಿಗಳ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ, ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು, ತಮ್ಮ ಉದ್ದಿಮೆ ಸ್ಥಾಪಿಸಿ, ಉತ್ಪಾದನೆ ಪ್ರಾರಂಭಿಸುವವರೆಗೂ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸೂಚಿಸಿದರು.
ಯುವಶಕ್ತಿ ಸಂಘಗಳಿಗೆ ಸಾಲ ನೀಡುವಾಗ, ಯೋಜನಾ ಮೊತ್ತ ಹೆಚ್ಚಾಗಿದ್ದು, ಅವು ಲಾಭದಾಯಕ ಯೋಜನೆಗಳಾದರೆ, ಬ್ಯಾಂಕುಗಳು ಸರ್ಕಾರ ನಿಗದಿಪಡಿಸಿದ 5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿ, ಯುವಕರನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ಸಲಹೆ ನೀಡಿದರು.
ಸಚಿವ ನಾರಾಯಣ ಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಕ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
10,000 ರೂ. ಸುತ್ತು ನಿಧಿ
ರಾಜ್ಯದಲ್ಲಿ ಒಟ್ಟು 5951 ಗ್ರಾಮ ಪಂಚಾಯಿತಿಗಳಿದ್ದು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ, ಪ್ರತಿ ಗ್ರಾಪಂಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಇದೀಗ ಒಟ್ಟು 6,509 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿದ್ದು 5,393 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಬೇಕಾಗಿದೆ. ಈಗಾಗಲೇ 1754 ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000 ರೂ.ಗಳ ಸುತ್ತು ನಿಧಿಯನ್ನು ಪಾವತಿಸಲಾಗಿದೆ ಎಂದು ಸರ್ಕಾರ ಹೇಳಿದೆ.